×
Ad

"ಅತ್ಯಂತ ತಪ್ಪು ಆದೇಶ": ಸಿವಿಲ್ ವ್ಯಾಜ್ಯವನ್ನು ಕ್ರಿಮಿನಲ್ ಪ್ರಕರಣವಾಗಿ ಪರಿಗಣಿಸಲು ಅನುಮತಿ ನೀಡಿದ ಹೈಕೋರ್ಟ್‌ಗೆ ಸುಪ್ರೀಂ ಚಾಟಿ

Update: 2025-08-05 17:14 IST

ಸುಪ್ರೀಂ | PC :  PTI 

ಹೊಸದಿಲ್ಲಿ: ಸಿವಿಲ್ ವ್ಯಾಜ್ಯವನ್ನು ಕ್ರಿಮಿನಲ್ ಪ್ರಕರಣವನ್ನಾಗಿ ಪರಿಗಣಿಸಲು ಅನುಮತಿ ನೀಡಿದ್ದಕ್ಕಾಗಿ ಅಲಹಾಬಾದ್ ಉಚ್ಚ ನ್ಯಾಯಾಲಯವನ್ನು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ತೀವ್ರ ತರಾಟೆಗೆತ್ತಿಕೊಂಡಿದೆ. ಉಚ್ಚ ನ್ಯಾಯಾಲಯದ ಆದೇಶವನ್ನು ಅದು ತಾನು ಇತ್ತೀಚಿಗೆ ನೋಡಿರುವ ‘ಅತ್ಯಂತ ಕೆಟ್ಟ ಮತ್ತು ತಪ್ಪು’ ತೀರ್ಪುಗಳಲ್ಲಿ ಒಂದಾಗಿದೆ ಎಂದು ಬಣ್ಣಿಸಿದೆ.

ಸಿವಿಲ್ ವ್ಯಾಜ್ಯದಲ್ಲಿ ವಸೂಲಾತಿಯು ಸಮಯವನ್ನು ತೆಗೆದುಕೊಳ್ಳಬಹುದು ಎಂಬ ಏಕೈಕ ಕಾರಣಕ್ಕಾಗಿ ಚೆಕ್ ಬೌನ್ಸ್‌ನಂತಹ ಸಂಪೂರ್ಣವಾಗಿ ಸಿವಿಲ್ ಸ್ವರೂಪದ ವಿಷಯದಲ್ಲಿ ಕ್ರಿಮಿನಲ್ ವಿಚಾರಣೆಗಳನ್ನು ಉಚ್ಚ ನ್ಯಾಯಾಲಯವು ಸಮರ್ಥಿಸಿಕೊಂಡಿದ್ದಕ್ಕಾಗಿ ಆಘಾತವನ್ನು ವ್ಯಕ್ತಪಡಿಸಿದ ಸರ್ವೋಚ್ಚ ನ್ಯಾಯಾಲಯವು, ‘ಇದು ಆಕ್ಷೇಪಾರ್ಹ ಆದೇಶದ ಪ್ಯಾರಾಗ್ರಾಫ್ 12ರಲ್ಲಿ ಒಳಗೊಂಡಿರುವ ಅವಲೋಕನಗಳನ್ನು ಓದಲು ಎಲ್ಲರಿಗೂ ಅತ್ಯಂತ ದುಃಖಕರ ದಿನವಾಗಿದೆ’ ಎಂದು ಕಟುವಾಗಿ ಹೇಳಿತು.

ಸಿವಿಲ್ ವ್ಯಾಜ್ಯದಲ್ಲಿ ಬಾಕಿ ಹಣದ ವಸೂಲಾತಿಯು ಗಣನೀಯ ಸಮಯವನ್ನು ತೆಗೆದುಕೊಳ್ಳಬಹುದು ಎಂಬ ಕಾರಣಕ್ಕೆ ಸಿವಿಲ್ ವಿವಾದದಲ್ಲಿ ದೂರುದಾರರು ಹೂಡಿರುವ ಕ್ರಿಮಿನಲ್ ಮೊಕದ್ದಮೆಯನ್ನು ಉಚ್ಚ ನ್ಯಾಯಾಲಯವು ಸಮರ್ಥನೀಯ ಎಂದು ಹೇಳಿದೆ ಎಂದು ಬೆಟ್ಟು ಮಾಡಿದ ಸರ್ವೋಚ್ಚ ನ್ಯಾಯಾಲಯದ ಪೀಠವು,ಈ ತಾರ್ಕಿಕತೆಯನ್ನು ಪ್ರಕ್ರಿಯೆಯ ಸ್ಪಷ್ಟ ದುರುಪಯೋಗ ಎಂದು ಬಣ್ಣಿಸಿದೆ.

ಸಿವಿಲ್ ದಾವೆಗಳನ್ನು ಇತ್ಯರ್ಥಗೊಳಿಸಲು ಕ್ರಿಮಿನಲ್ ಕಾನೂನನ್ನು ಬಳಸುವಂತಿಲ್ಲ ಎಂಬ ಸುಸ್ಥಾಪಿತ ಕಾನೂನು ತತ್ವವನ್ನು ಉಚ್ಚ ನ್ಯಾಯಾಲಯವು ಅರ್ಥ ಮಾಡಿಕೊಳ್ಳಬೇಕು ಎಂದು ಒತ್ತಿ ಹೇಳಿದ ಸರ್ವೋಚ್ಚ ನ್ಯಾಯಾಲಯವು,‘ವಂಚನೆ ಮತ್ತು ಕ್ರಿಮಿನಲ್ ವಿಶ್ವಾಸ ದ್ರೋಹದ ಆರೋಪವನ್ನು ರೂಪಿಸಲು ಎರಡು ಅಪರಾಧಗಳ ನಡುವಿನ ಸೂಕ್ಷ್ಮ ವ್ಯತ್ಯಾಸ ಮತ್ತು ಅಗತ್ಯ ಅಂಶಗಳನ್ನು ಕನಿಷ್ಠ ಉಚ್ಚ ನ್ಯಾಯಾಲಯವು ಅರ್ಥ ಮಾಡಿಕೊಳ್ಳುತ್ತದೆ ಎಂದು ನಾವು ನಿರೀಕ್ಷಿಸಿದ್ದೆವು ’ಎಂದು ಹೇಳಿತು.

ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಪ್ರಕರಣವನ್ನು ನಿರ್ವಹಿಸಿದ ರೀತಿಗೆ ಬಲವಾದ ಆಕ್ಷೇಪವನ್ನು ವ್ಯಕ್ತಪಡಿಸಿದ ಅದು,ಇಂತಹ ನ್ಯಾಯಾಂಗ ಅತಿಕ್ರಮಣವು ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ಸರಣಿ ನಿರ್ದೇಶನಗಳನ್ನು ಹೊರಡಿಸಿತು.

ಸಂಬಂಧಿತ ನ್ಯಾಯಾಧೀಶರನ್ನು ಕ್ರಿಮಿನಲ್ ನ್ಯಾಯ ನಿರ್ಣಯದಿಂದ ತಕ್ಷಣವೇ ಹಿಂದೆಗೆದುಕೊಳ್ಳುವಂತೆ ಮತ್ತು ಅವರು ಹುದ್ದೆಯಿಂದ ಕೆಳಗಿಳಿಯುವವರೆಗೆ ಯಾವುದೇ ಕ್ರಿಮಿನಲ್ ವಿಷಯಗಳನ್ನು ಅವರಿಗೆ ನಿಯೋಜಿಸದಂತೆ ಅಲಹಾಬಾದ್ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಸರ್ವೋಚ್ಚ ನ್ಯಾಯಾಲಯವು ನಿರ್ದೇಶನ ನೀಡಿತು.

ಹೆಚ್ಚುವರಿಯಾಗಿ ಸಂಬಂಧಿಸಿದ ನ್ಯಾಯಾಧೀಶರನ್ನು ಅನುಭವಿ ಹಿರಿಯ ನ್ಯಾಯಾಧೀಶರೊಂದಿಗೆ ವಿಭಾಗೀಯ ಪೀಠದಲ್ಲಿ ಕೂಡಿಸುವಂತೆ ಮತ್ತು ಭವಿಷ್ಯದಲ್ಲಿ ಏಕನ್ಯಾಯಾಧೀಶರಾಗಿ ಅವರಿಗೆ ಯಾವುದೇ ಕ್ರಿಮಿನಲ್ ಪ್ರಕರಣವನ್ನು ನಿಯೋಜಿಸಬಾರದು ಎಂದೂ ಅದು ನಿರ್ದೇಶನ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News