ಬಿಹಾರ ಕರಡು ಮತದಾರರ ಪಟ್ಟಿ | ಅಳಿಸಲಾದ 65 ಲಕ್ಷ ಮತದಾರರ ವಿವರ ಸಲ್ಲಿಸಲು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚನೆ
ಸುಪ್ರೀಂ ಕೋರ್ಟ್ | PTI
ಹೊಸದಿಲ್ಲಿ, ಆ. 6: ವಿಧಾನ ಸಭೆ ಚುನಾವಣೆ ನಡೆಯಲಿರುವ ಬಿಹಾರದಲ್ಲಿ ಕರಡು ಮತದಾರರ ಪಟ್ಟಿಯಿಂದ ಹೊರಗುಳಿದ ಸುಮಾರು 65 ಲಕ್ಷ ಮತದಾರರ ವಿವರಗಳನ್ನು ಆಗಸ್ಟ್ 9ರ ಒಳಗೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಬುಧವಾರ ಚುನಾವಣಾ ಆಯೋಗಕ್ಕೆ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ಉಜ್ಜಲ್ ಭುಯಾನ್ ಹಾಗೂ ಎನ್. ಕೋಟೀಶ್ವರ್ ಸಿಂಗ್ ಅವರನ್ನು ಒಳಗೊಂಡ ಪೀಠ, ಅಳಿಸಲಾದ ಮತದಾರರ ವಿವರಗಳನ್ನು, ಈಗಾಗಲೇ ರಾಜಕೀಯ ಪಕ್ಷಗಳೊಂದಿಗೆ ಹಂಚಿಕೊಂಡ ದತ್ತಾಂಶವನ್ನು ಸಲ್ಲಿಸುವಂತೆ, ಹಾಗೂ ಅದರ ಒಂದು ಪ್ರತಿಯನ್ನು ಸರಕಾರೇತರ ಸಂಸ್ಥೆ (ಎನ್‌ಜಿಒ) ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ನೀಡುವಂತೆ ಚುನಾವಣಾ ಆಯೋಗದ ವಕೀಲರಿಗೆ ಸೂಚಿಸಿದೆ.
ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಗಾಗಿ ಚುನಾವಣಾ ಆಯೋಗ ಜೂನ್ 24ರಂದು ಹೊರಡಿಸಿದ ಆದೇಶ ಪ್ರಶ್ನಿಸಿ ಅಸೋಸಿಯೇಷನ್ ಪಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ಈ ಹೊಸ ಮನವಿ ಸಲ್ಲಿಸಿದೆ. ಅಳಿಸಲಾದ ಸುಮಾರು 65 ಲಕ್ಷ ಮತದಾರರ ಹೆಸರುಗಳನ್ನು ಪ್ರಕಟಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಅದು ಮನವಿಯಲ್ಲಿ ಕೋರಿದೆ. ಈ ವ್ಯಕ್ತಿಗಳು ಮರಣ ಹೊಂದಿರುವುದರಿಂದ, ಶಾಶ್ವತವಾಗಿ ವಲಸೆ ಹೋಗಿರುವುದರಿಂದ ಅಥವಾ ಬೇರೆ ಯಾವ ಕಾರಣಕ್ಕೆ ಪಟ್ಟಿಯಿಂದ ತೆಗೆದು ಹಾಕಲಾಗಿದೆಯೇ ಎಂಬುದನ್ನು ನಿರ್ದಿಷ್ಟಪಡಿಸುವಂತೆ ಅದು ಕೋರಿದೆ.
ಪ್ರಸಕ್ತ ಪಟ್ಟಿ ಈಗ ಕೇವಲ ಕರಡು ರೂಪದಲ್ಲಿ ಇರುವುದರಿಂದ ಅಳಿಸುವಿಕೆಗೆ ಕಾರಣವನ್ನು ಅನಂತರ ತಿಳಿಸಲಾಗುವುದು ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ಪರವಾಗಿ ಹಾಜರಾಗಿದ್ದ ನ್ಯಾಯವಾದಿ ಪ್ರಶಾಂತ್ ಭೂಷಣ್ ಗೆ ಪೀಠ ತಿಳಿಸಿತು.
ಕೆಲವು ರಾಜಕೀಯ ಪಕ್ಷಗಳಿಗೆ ಅಳಿಸಲಾದ ಮತದಾರರ ಪಟ್ಟಿಯನ್ನು ನೀಡಲಾಗಿದೆ. ಆದರೆ ಆ ಪಟ್ಟಿಯಲ್ಲಿರುವ ಮತದಾರರು ಮೃತಪಟ್ಟಿದ್ದಾರೆಯೋ ವಲಸೆ ಹೋಗಿದ್ದಾರೆಯೋ ಎಂದು ಸ್ಪಷ್ಟಪಡಿಸಿಲ್ಲ ಎಂದು ಪ್ರಶಾಂತ್ ಭೂಷಣ್ ಪ್ರತಿಪಾದಿಸಿದ್ದಾರೆ.
ಮತದಾರರ ಪಟ್ಟಿಯಿಂದ ಹೊರಬೀಳುವ ಮತದಾರರ ವಿವರಗಳನ್ನು ನೀಡಬೇಕು. ಅದನ್ನು ನಾವು ಪರಿಶೀಲಿಸಲಿದ್ದೇವೆ. ನೀವು ಶನಿವಾರದ ಒಳಗೆ ಪ್ರತಿಕ್ರಿಯೆ ಸಲ್ಲಿಸಬೇಕು ಹಾಗೂ ಪ್ರಶಾಂತ್ ಭೂಷಣ್ ಅವರಿಗೆ ಪರಿಶೀಲಿಸಲು ಅವಕಾಶ ಮಾಡಿಕೊಡಬೇಕು. ಅನಂತರ ನಾವು ಏನನ್ನು ಬಹಿರಂಗಪಡಿಸಿಲ್ಲ ಹಾಗೂ ಏನನ್ನು ಬಹಿರಂಗಪಡಿಸಲಾಗಿದೆ ಎಂಬುದನ್ನು ನೋಡಬಹುದು ಎಂದು ಪೀಠ ಚುನಾವಣಾ ಆಯೋಗದ ವಕೀಲರಿಗೆ ತಿಳಿಸಿತು.
ಗಣತಿ ಅರ್ಜಿ ಸಲ್ಲಿಸಿದವರಲ್ಲಿ ಶೇ. 75 ಮತದಾರರು ಅಗತ್ಯದ 11 ದಾಖಲೆಗಳ ಪಟ್ಟಿಯಲ್ಲಿ ಉಲ್ಲೇಖಿಸಲಾದ ಯಾವುದೇ ಪೂರಕ ದಾಖಲೆಗಳನ್ನು ಸಲ್ಲಿಸಿಲ್ಲ. ಭಾರತೀಯ ಚುನಾವಣಾ ಆಯೋಗದ ಬೂತ್ ಮಟ್ಟದ ಅಧಿಕಾರಿಗಳ ಶಿಫಾರಸಿನ ಮೇರೆಗೆ ಅವರ ಹೆಸರನ್ನು ಸೇರಿಸಲಾಗಿದೆ ಎಂದು ಪ್ರಶಾಂತ್ ಭೂಷಣ್ ಹೇಳಿದರು.
ಚುನಾವಣಾ ಆಯೋಗದ ಜೂನ್ 24ರ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳ ಗುಚ್ಛದ ವಿಚಾರಣೆ ಆಗಸ್ಟ್ 12ರಂದು ಆರಂಭವಾಗಲಿದೆ. ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾಮ್ಸ್ ಅಂದು ಈ ಹೇಳಿಕೆ ನೀಡಬಹುದು ಎಂದು ಪೀಠ ತಿಳಿಸಿದೆ.