ಅ.27ರಂದು ಸುಪ್ರೀಂ ಕೋರ್ಟ್‌ನಿಂದ ಉಮರ್ ಖಾಲಿದ್, ಶರ್ಜೀಲ್ ಇಮಾಮ್ ಜಾಮೀನು ಅರ್ಜಿ ವಿಚಾರಣೆ
ಉಮರ್ ಖಾಲಿದ್ , ಶರ್ಜೀಲ್ ಇಮಾಮ್ | Photo Credit : PTI
ಹೊಸದಿಲ್ಲಿ, ಅ. 24: ದಿಲ್ಲಿ ಗಲಭೆಗೆ ಪಿತೂರಿ ಆರೋಪದಲ್ಲಿ ಬಂಧಿತರಾಗಿರುವ ಗುಲ್ಫಿಶಾ ಫಾತಿಮಾ, ಶರ್ಜೀಲ್ ಇಮಾಮ್, ಮೀರನ್ ಹೈದರ್, ಉಮರ್ ಖಾಲಿದ್, ಶಿಫಾ ಉರ್ ರಹ್ಮಾನ್ ಹಾಗೂ ಮುಹಮ್ಮದ್ ಸಲೀಮ್ ಖಾನ್ ಸಲ್ಲಿಸಿದ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಅಕ್ಟೋಬರ್ 27ರಂದು ವಿಚಾರಣೆ ನಡೆಸಲಿದೆ.
7 ದಿನಗಳ ದೀಪಾವಳಿ ರಜೆಯ ಬಳಿಕ ನ್ಯಾಯಾಲಯ ಮತ್ತೆ ಕಾರ್ಯನಿರ್ವಹಿಸಲು ಆರಂಭಿಸಿದಾಗ ನ್ಯಾಯಮೂರ್ತಿಗಳಾದ ಅರವಿಂದ ಕುಮಾರ್ ಹಾಗೂ ಎನ್.ವಿ.ಅಂಜಾರಿಯಾ ನೇತೃತ್ವದ ಪೀಠ ಜಾಮೀನು ಅರ್ಜಿಯ ವಿಚಾರಣೆ ನಡೆಸಲಿದೆ.
ಇಮಾಮ್ ಸೇರಿದಂತೆ ಹಲವು ಆರೋಪಿಗಳನ್ನು ಪ್ರತಿನಿಧಿಸಿರುವ ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ, ಅವರು ವಿದ್ಯಾರ್ಥಿಗಳು. ಕಳೆದ 5 ವರ್ಷಗಳಿಂದ ಕಾರಾಗೃಹದಲ್ಲಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ.
2020ರ ಈಶಾನ್ಯ ದಿಲ್ಲಿ ಗಲಭೆಗೆ ಸಂಬಂಧಿಸಿ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಜಾಮೀನು ಅರ್ಜಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯ ತಿರಸ್ಕರಿಸಿದ ಬಳಿಕ ಇಮಾಮ್ ಸೆಪ್ಟಂಬರ್ 6ರಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇದೇ ರೀತಿ ಉಮರ್ ಖಾಲಿದ್ ಕೂಡ ಜಾಮೀನು ಕೋರಿ ಸಲ್ಲಿಸಿದ ಅರ್ಜಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯ ತಿರಸ್ಕರಿಸಿತ್ತು. ಅನಂತರ ಅವರು ಸೆಪ್ಟಂಬರ್ 10ರಂದು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯ ಹಾಗೂ ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ಇಮಾಮ್ ಅವರನ್ನು 2020ರ ಜನವರಿಯಲ್ಲಿ ಬಿಹಾರದ ಜೆಹ್ನಾಬಾದ್‌ನಿಂದ ಬಂಧಿಸಲಾಗಿತ್ತು ಎಂದು ಪ್ರಾಸಿಕ್ಯೂಷನ್ ಪ್ರತಿಪಾದಿಸಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆ 2020 ಫೆಬ್ರವರಿಯಲ್ಲಿ ಗಲಭೆಗೆ ಕಾರಣವಾಗಿತ್ತು. ಈ ವೇಳೆ 53 ಮಂದಿ ಮೃತಪಟ್ಟಿದ್ದರು ಹಾಗೂ ನೂರಾರು ಮಂದಿ ಗಾಯಗೊಂಡಿದ್ದರು. ಇಮಾಮ್ ವ್ಯಾಪಕ ಹಿಂಸಾಚಾರಕ್ಕೆ ಸಂಚು ರೂಪಿಸಿದ್ದಾರೆ ಎಂದು ಅಧಿಕಾರಿಗಳು ಆರೋಪಿಸಿದ್ದರು. ಅವರ ವಿರುದ್ಧ ಹಲವು ರಾಜ್ಯಗಳಲ್ಲಿ ಹಲವು ಎಫ್‌ಐಆರ್‌ಗಳು ದಾಖಲಾಗಿದ್ದವು.
ಹಿಂಸಾಚಾರ ಪಿತೂರಿಯ ಭಾಗವಾಗಿತ್ತು ಎಂದು ಉಲ್ಲೇಖಿಸಿ ದಿಲ್ಲಿ ಉಚ್ಚ ನ್ಯಾಯಾಲಯ ಖಾಲಿದ್, ಇಮಾಮ್ ಸೇರಿದಂತೆ 9 ಮಂದಿ ಆರೋಪಿಗಳ ಜಾಮೀನು ಅರ್ಜಿಯನ್ನು ಸೆಪ್ಟಂಬರ್ 2ರಂದು ತಿರಸ್ಕರಿಸಿತ್ತು. ಯುಎಪಿಎ ಆರೋಪಗಳ ಅಡಿಯಲ್ಲಿ 2020 ಸೆಪ್ಟಂಬರ್ 14ರಿಂದ ಕಾರಾಗೃಹದಲ್ಲಿರುವ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದ ಮಾಜಿ ವಿದ್ಯಾರ್ಥಿ ಹಾಗೂ ಸಾಮಾಜಿಕ ಹೋರಾಟಗಾರ ಖಾಲಿದ್ ಗಲಭೆಯಲ್ಲಿ ಭಾಗಿಯಾಗಿದ್ದ ಆರೋಪವನ್ನು ನಿರಾಕರಿಸಿದ್ದಾರೆ.