ಹರ್ಯಾಣ | ವಿವಿಯಲ್ಲಿ ಮುಟ್ಟಿನ ಪುರಾವೆ ಕೇಳಿದ ಆರೋಪ; ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್
ಸುಪ್ರೀಂ ಕೋರ್ಟ್ | Photo Credit : sci.gov.in
ಹೊಸದಿಲ್ಲಿ, ನ. 28: ಹರ್ಯಾಣದ ಮಹರ್ಷಿ ದಯಾನಂದ ವಿಶ್ವವಿದ್ಯಾನಿಲಯದಲ್ಲಿ ನೈರ್ಮಲ್ಯ ಕಾರ್ಮಿಕರಿಗೆ ಮುಟ್ಟಾಗಿರುವುದನ್ನು ಗುಪ್ತಾಂಗದ ಫೊಟೊಗಳ ಮೂಲಕ ಸಾಬೀತುಪಡಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಿ ಸಲ್ಲಿಸಿದ ಅರ್ಜಿಯ ಕುರಿತಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರಕಾರ ಹಾಗೂ ಇತರರ ಪ್ರತಿಕ್ರಿಯೆ ಕೇಳಿದೆ.
ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನಾ ಹಾಗೂ ಆರ್. ಮಹಾದೇವನ್ ಅವರ ಪೀಠ ಕೇಂದ್ರ ಸರಕಾರ ಹಾಗೂ ಇತರರಿಗೆ ನೋಟಿಸು ಜಾರಿ ಮಾಡಿದೆ.
‘‘ಇದು ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಕರ್ನಾಟಕದಲ್ಲಿ ಮಹಿಳೆಯರಿಗೆ ಮುಟ್ಟಿನ ರಜೆ ನೀಡುತ್ತಾರೆ. ಈ ಸುದ್ದಿ ಕೇಳಿದ ಬಳಿಕ ಅವರು ಕೂಡ ಮುಟ್ಟಿನ ರಜೆಗೆ ಪುರಾವೆ ಕೇಳಬಹುದು ಎಂದು ನಾನು ಭಾವಿಸಿದೆ’’ ಎಂದು ನ್ಯಾಯಮೂರ್ತಿ ನಾಗರತ್ನ ಅಭಿಪ್ರಾಯಿಸಿದ್ದಾರೆ.
‘‘ಇದು ವ್ಯಕ್ತಿಗಳ ಮನಸ್ಥಿತಿಯನ್ನು ತೋರಿಸುತ್ತದೆ. ಅವರ ಅನುಪಸ್ಥಿತಿಯಿಂದ ಕೆಲವು ಭಾರವಾದ ಕೆಲಸಗಳನ್ನು ಮಾಡಲು ಸಾಧ್ಯವಾಗದೇ ಇದ್ದರೆ, ಬೇರೆಯವರನ್ನು ನಿಯೋಜಿಸಬಹುದಿತ್ತು. ಈ ಅರ್ಜಿಯಿಂದ ಏನಾದರೂ ಒಳ್ಳೆಯದು ಆಗುತ್ತದೆ ಎಂದು ನಾವು ಭಾವಿಸುತ್ತೇವೆ’’ ಎಂದು ಅವರು ಹೇಳಿದ್ದಾರೆ.
ವಿಚಾರಣೆ ಸಂದರ್ಭ ಸುಪ್ರೀಂ ಕೋರ್ಟ್ ಬಾರ್ ಅಸೋಶಿಯೇಷನ್ (ಎಸ್‌ಸಿಬಿಎ) ಅಧ್ಯಕ್ಷ ಹಾಗೂ ಹಿರಿಯ ವಕೀಲ ವಿಕಾಸ್ ಸಿಂಗ್, ಇದು ತುಂಬಾ ಗಂಭೀರವಾದ ಕ್ರಿಮಿನಲ್ ಪ್ರಕರಣ. ಇದು ಗಮನ ಹರಿಸಬೇಕಾದ ವಿಚಾರ ಎಂದು ಹೇಳಿದ್ದಾರೆ.
ಅನಂತರ ಪೀಠ ಅರ್ಜಿಯ ವಿಚಾರಣೆಯನ್ನು ಡಿಸೆಂಬರ್ 15ಕ್ಕೆ ಮುಂದೂಡಿತು.
ಈ ಆರೋಪದ ಕುರಿತು ವಿಸ್ತೃತ ತನಿಖೆ ನಡೆಸುವಂತೆ ಕೇಂದ್ರ ಸರಕಾರ ಹಾಗೂ ಹರ್ಯಾಣ ಸರಕಾರಕ್ಕೆ ನಿರ್ದೇಶನ ನೀಡುವಂತೆ ಅರ್ಜಿ ಕೋರಿತ್ತು.