×
Ad

ನಿವೃತ್ತಿಯ ಅಂಚಿನಲ್ಲಿರುವ ನ್ಯಾಯಾಧೀಶರಿಂದ ಸರಣಿ ತೀರ್ಪುಗಳನ್ನು ನೀಡುವುದಕ್ಕೆ ಸುಪ್ರೀಂ ಆಕ್ಷೇಪ

Update: 2025-12-18 20:25 IST

ಸುಪ್ರೀಂಕೋರ್ಟ್ | Photo Credit :  PTI  

ಹೊಸದಿಲ್ಲಿ,ಡಿ.18: ನ್ಯಾಯಾಂಗದಲ್ಲೂ ಭ್ರಷ್ಟಾಚಾರ ಇರುವ ಬಗ್ಗೆ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಸುಪ್ರೀಂಕೋರ್ಟ್ ನ್ಯಾಯಪೀಠವು ಒಪ್ಪಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದೆ. ನಿವೃತ್ತಿಯ ಸನಿಹದಲ್ಲಿರುವಾಗ ನ್ಯಾಯಾಧೀಶರುಗಳು ಅಸಮರ್ಪಕವಾದ ಪರಿಗಣನೆಗಳಿಂದ ಪ್ರೇರಿತವಾಗಿ ಸರಣಿ ಆದೇಶಗಳನ್ನು ಹೊರಡಿಸುವ ಪ್ರವೃತ್ತಿ ಹೆಚ್ಚುತ್ತಿರುವುದನ್ನು ಅದು ಬೆಟ್ಟು ಮಾಡಿ ತೋರಿಸಿದೆ ಎಂದು Times of India ಸುದ್ದಿಸಂಸ್ಥೆ ವರದಿ ಮಾಡಿದೆ.

ತಾನು ನೀಡಿದ್ದ ಎರಡು ತೀರ್ಪುಗಳ ಕಾರಣದಿಂದಾಗಿ, ನಿವೃತ್ತಿಗೆ ಹತ್ತು ದಿನಗಳ ಮೊದಲು ತನ್ನನ್ನು ಸೇವೆಯಿಂದ ಅಮಾನತುಗೊಳಿಸಿದ್ದನ್ನು ಪ್ರಶ್ನಿಸಿ ಮಧ್ಯಪ್ರದೇಶದ ಪ್ರಧಾನ ಜಿಲ್ಲಾ ನ್ಯಾಯಾಧೀಶರು ಸಲ್ಲಿಸಿದ ಅರ್ಜಿಯ ಆಲಿಕೆಯನ್ನು ನಡೆಸಿದ ಸಂದರ್ಭ ಸುಪ್ರೀಂಕೋರ್ಟ್ ನ್ಯಾಯಪೀಠ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ನಿವೃತ್ತಿಯ ಅಂಚಿನಲ್ಲಿರುವಾಗ ಸರಣಿ ತೀರ್ಪುಗಳನ್ನು ನೀಡಿದ ಅರ್ಜಿದಾರರ ನಡೆಯನ್ನು ಸಿಜೆಐ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿ ಜಯ್‌ಮಾಲ್ಯಾ ಬಾಗ್ಚಿ ಅವರನ್ನೊಳಗೊಂಡ ನ್ಯಾಯಪೀಠ ಆಕ್ಷೇಪಿಸಿತು.

‘‘ ನಿವೃತ್ತಿಗೆ ತುಸು ಮುನ್ನ ಅರ್ಜಿದಾರರು ಸಿಕ್ಸರ್‌ ಗಳನ್ನು ಬಾರಿಸತೊಡಗಿದರು. ಇದೊಂದು ದುರದೃಷ್ಟಕರ ಪ್ರವೃತ್ತಿ. ಆದರೆ ಅದನ್ನು ವಿಸ್ತರಿಸಿ ಹೇಳಲು ನಾವು ಬಯಸುವುದಿಲ್ಲ’’ ಎಂದು ನ್ಯಾಯಪೀಠ ತಿಳಿಸಿತು.

ಅರ್ಜಿದಾರ ನ್ಯಾಯಾಧೀಶರ ಪರ ವಕೀಲರು ವಾದ ಮಂಡಿಸುತ್ತಾ, ತನ್ನ ಕಕ್ಷಿದಾರನ ವೃತ್ತಿಯ ಸಾಧನೆ ಪ್ರಶಂಸನೀಯವಾಗಿದ್ದು, ಕರ್ತವ್ಯ ನಿರ್ವಹಣೆಗೆ ಸಂಬಂಧಿಸಿದ ವಾರ್ಷಿಕ ಗೋಪ್ಯ ವರದಿಯಲ್ಲಿ ಅವರು ಉತ್ತಮ ರೇಟಿಂಗ್ ಪಡೆದಿದ್ದರು. ನ. 30ರಂದು ಅವರ ನಿವೃತ್ತಿ ಅವಧಿ ವಿಸ್ತರಣೆಗೊಳ್ಳುವುದರಲ್ಲಿತ್ತು. ಆದರೆ ಅವರು ಹೊರಡಿಸಿದ ಎರಡು ನ್ಯಾಯಾಂಗದ ಆದೇಶಗಳಿಗಾಗಿ ಅವರನ್ನು ಅಮಾನತುಗೊಳಿಸಲಾಗಿತ್ತು ಎಂದು ಹೇಳಿದರು.

ಆಗ ಉತ್ತರಿಸಿದ ಸಿಜೆಐ ಕಾಂತ್ ಅವರು, ಈ ಎರಡು ಆದೇಶಗಳನ್ನು ಹೊರಡಿಸುವಾಗ ಆ ನ್ಯಾಯಾಧೀಶರಿಗೆ ತನ್ನ ನಿವೃತ್ತಿಯ ವಯಸ್ಸನ್ನು 1 ವರ್ಷದವರೆಗೆ ವಿಸ್ತರಿಸಲಾಗುವುದೆಂಬ ಬಗ್ಗೆ ಅರಿವಿರಲಿಲ್ಲ. ನಿವೃತ್ತಿಗೆ ತುಸು ಮೊದಲು ನ್ಯಾಯಾಧೀಶರುಗಳು ಹಲವಾರು ಆದೇಶಗಳನ್ನು ಜಾರಿಗೊಳಿಸುವ ಪ್ರವೃತ್ತಿ ಹೆಚ್ಚುತ್ತಿದೆ ಎಂದವರು ಅಸಮಾಧಾನ ವ್ಯಕ್ತಪಡಿಸಿದರು.

ತನ್ನನ್ನು ಅಮಾನತುಗೊಳಿಸಿರುವ ಕುರಿತಾಗಿ ಮಾಹಿತಿಯನ್ನು RTI ಅರ್ಜಿಯ ಮೂಲಕ ಕೇಳಿರುವ ಬಗ್ಗೆಯೂ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News