×
Ad

ಅತ್ಯಾಚಾರ ಅಪರಾಧಿ ಸೆಂಗರ್ ಜೈಲು ಶಿಕ್ಷೆ ಅಮಾನತು: ಸುಪ್ರೀಂಕೋರ್ಟ್ ಮೊರೆ ಹೋಗಲಿರುವ ಉನ್ನಾಂವ್ ಸಂತ್ರಸ್ತೆ

ನಮ್ಮ ಕುಟುಂಬದ ಪಾಲಿಗೆ ಕರಾಳ ತೀರ್ಪು ಎಂದ ಸಂತ್ರಸ್ತೆ

Update: 2025-12-24 19:59 IST

Photo Credit : ANI 

ಹೊಸದಿಲ್ಲಿ: ಉಚ್ಚಾಟಿತ ಬಿಜೆಪಿ ನಾಯಕ ಕುಲ್ದೀಪ್ ಸಿಂಗ್ ಸೆಂಗರ್ನ ಜೈಲು ಶಿಕ್ಷೆಯನ್ನು ಅಮಾನತುಗೊಳಿಸಿರುವ ಆದೇಶವನ್ನು ಬುಧವಾರ "ನಮ್ಮ ಕುಟುಂಬದ ಪಾಲಿಗೆ ಕರಾಳ" ಎಂದು ಬಣ್ಣಿಸಿರುವ ಉನ್ನಾಂವ್ ಸಂತ್ರಸ್ತೆ, ಈ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋಗುವುದಾಗಿ ಘೋಷಿಸಿದ್ದಾರೆ.

ಡಿಸೆಂಬರ್ 2019ರಲ್ಲಿ ಅತ್ಯಾಚಾರ ಆರೋಪಿ ಕುಲ್ದೀಪ್ ಸೆಂಗರ್ ಗೆ ಜೀವಾವಧಿ ಶಿಕ್ಷೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಅಮಾನತ್ತಿನಲ್ಲಿರಿಸಿರುವ ದಿಲ್ಲಿ ಹೈಕೋರ್ಟ್, ಮೇಲ್ಮನವಿ ಅರ್ಜಿ ವಿಲೇವಾರಿ ಆಗುವವರೆಗೂ ಕುಲ್ದೀಪ್ ಸಿಂಗ್ ಸೆಂಗರ್ ನನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಬೇಕು ಎಂದು ಆದೇಶಿಸಿದೆ.

ಕುಲ್ದೀಪ್ ಸಿಂಗ್ ಸೆಂಗರ್ ಅತ್ಯಾಚಾರ ಆರೋಪಿ ನಿವಾಸದ ಐದು ಕಿಮೀ ಸುತ್ತ ಮುತ್ತ ಓಡಾಡಬಾರದು ಹಾಗೂ ಅತ್ಯಾಚಾರ ಸಂತ್ರಸ್ತೆ ಹಾಗೂ ಆಕೆಯ ತಾಯಿಗೆ ಬೆದರಿಕೆ ಒಡ್ಡಬಾರದು ಎಂದು ದಿಲ್ಲಿ ಹೈಕೋರ್ಟ್ ತನ್ನ ಆದೇಶದಲ್ಲಿ ಷರತ್ತು ವಿಧಿಸಿದೆ. ಈ ಷರತ್ತುಗಳನ್ನು ಉಲ್ಲಂಘಿಸಿದರೆ, ಜಾಮೀನು ರದ್ದುಗೊಳ್ಳುತ್ತದೆ ಎಂದೂ ತನ್ನ ಆದೇಶದಲ್ಲಿ ಹೇಳಿದೆ.

ಹೀಗಿದ್ದೂ, ತನ್ನ ವಶದಲ್ಲಿ ಮೃತಪಟ್ಟಿದ್ದ ಸಂತ್ರಸ್ತೆಯ ತಂದೆ ಪ್ರಕರಣದಲ್ಲಿ ಕುಲ್ದೀಪ್ ಸಿಂಗ್ ಸೆಂಗರ್ 10 ವರ್ಷಗಳ ಸೆರೆವಾಸ ಶಿಕ್ಷೆ ಅನುಭವಿಸುತ್ತಿದ್ದು, ಈ ಪ್ರಕರಣದಲ್ಲಿ ಈವರೆಗೆ ಜಾಮೀನು ಮಂಜೂರಾಗದೆ ಇರುವುದರಿಂದ, ಆತ ಸದ್ಯದಲ್ಲಿ ಜೈಲಿನಿಂದ ಬಿಡುಗಡೆಯಾಗುವುದಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News