ಸಮಯ ಬಂದಾಗ ಪ್ರಿಯಾಂಕಾ ಗಾಂಧಿ ಪ್ರಧಾನಿ ಆಗಬಹುದು: ರಾಬರ್ಟ್ ವಾದ್ರಾ
ಇಂದಿರಾರಂತೆ ಪ್ರಿಯಾಂಕಾ ಬಲಿಷ್ಠ ಪ್ರಧಾನಿಯಾಗಬಹುದು ಎಂದಿದ್ದ ಸಂಸದ ಇಮ್ರಾನ್ ಮಸೂದ್
ಹೊಸದಿಲ್ಲಿ: ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ರಾಜಕೀಯದಲ್ಲಿ ಉಜ್ವಲ ಭವಿಷ್ಯವಿದ್ದು, ಜನರು ಅವರನ್ನು ಉನ್ನತ ಸ್ಥಾನದಲ್ಲಿ ನೋಡಲು ಬಯಸುವ ಸಮಯ ಖಂಡಿತ ಬರುತ್ತದೆ; ಅದು ಕಾಲಕ್ರಮೇಣ ಅನಿವಾರ್ಯವಾಗಿ ಸಂಭವಿಸುತ್ತದೆ ಎಂದು ಉದ್ಯಮಿ ರಾಬರ್ಟ್ ವಾದ್ರಾ ಹೇಳಿದ್ದಾರೆ.
ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಅವರು ಪ್ರಿಯಾಂಕಾ ಗಾಂಧಿ, ಇಂದಿರಾ ಗಾಂಧಿಯಂತೆ ಬಲಿಷ್ಠ ಪ್ರಧಾನಿಯಾಗಬಹುದು ಎಂದು ಹೇಳಿದ್ದರು. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಕಿರುಕುಳದ ಕುರಿತು ಮಾತನಾಡುವ ಸಂದರ್ಭದಲ್ಲಿ ಮಸೂದ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ರಾಬರ್ಟ್ ವಾದ್ರಾ, “ಪ್ರಿಯಾಂಕಾ ತಮ್ಮ ಅಜ್ಜಿ ಇಂದಿರಾ ಗಾಂಧಿ, ತಂದೆ ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಸಹೋದರ ರಾಹುಲ್ ಗಾಂಧಿ ಅವರಿಂದ ಬಹಳಷ್ಟು ಕಲಿತಿದ್ದಾರೆ. ಅವರು ಮಾತನಾಡುವಾಗ ಮನದಾಳದಿಂದ ಮಾತನಾಡುತ್ತಾರೆ. ಜನರು ಕೇಳಬೇಕಾದ ವಿಚಾರಗಳನ್ನೇ ಮುಂದಿಟ್ಟು ಅವರು ಚರ್ಚಿಸುತ್ತಾರೆ” ಎಂದರು.
“ರಾಜಕೀಯದಲ್ಲಷ್ಟೇ ಅಲ್ಲ, ದೇಶದಲ್ಲಿ ತಳಮಟ್ಟದಲ್ಲಿ ಅಗತ್ಯವಿರುವ ಬದಲಾವಣೆಗಳನ್ನು ತರಲು ಕೂಡ ಅವರಿಗೆ ಭರವಸೆಯ ಭವಿಷ್ಯವಿದೆ. ಅದು ಅವರ ಚಿಂತನೆಗಳಷ್ಟೇ ಅಲ್ಲ, ಜನರ ಆಶಯಗಳನ್ನು ಒಳಗೊಂಡ ಪ್ರಕ್ರಿಯೆ. ಇವೆಲ್ಲವೂ ಸಮಯ ಬಂದಾಗ ನಡೆಯಲಿದೆ; ಅದು ಅನಿವಾರ್ಯ,” ಎಂದು ವಾದ್ರಾ ಅಭಿಪ್ರಾಯಪಟ್ಟರು.
ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸತತ ಹಿನ್ನಡೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ, ಪ್ರಿಯಾಂಕಾ ಗಾಂಧಿಗೆ ಪಕ್ಷದಲ್ಲಿ ಹೆಚ್ಚಿನ ಜವಾಬ್ದಾರಿ ನೀಡಬೇಕೆಂಬ ಬೇಡಿಕೆಗಳು ಪಕ್ಷದೊಳಗಿನ ಕೆಲವು ವಲಯಗಳಿಂದ ಮತ್ತೆ ಮತ್ತೆ ಕೇಳಿಬರುತ್ತಿವೆ.
ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ಶೆಹಝಾದ್ ಪೂನಾವಾಲಾ, ಕಾಂಗ್ರೆಸ್‌ನಲ್ಲಿ ನಾಯಕತ್ವದ ಕುರಿತು ಗೊಂದಲವಿದೆ ಎಂದು ಟೀಕಿಸಿದರು. “ರಾಹುಲ್ ಗಾಂಧಿಯ ಮಾತುಗಳನ್ನು ಅವರದೇ ಸಹೋದ್ಯೋಗಿಗಳು ತಿರಸ್ಕರಿಸುತ್ತಿದ್ದಾರೆ. ಬಿಹಾರದಲ್ಲಿ ಎನ್‌ಡಿಎ ಸಾಧನೆಗಳನ್ನು ಶಶಿ ತರೂರ್ ಶ್ಲಾಘಿಸಿದ್ದು ಇತ್ತೀಚಿನ ಉದಾಹರಣೆ,” ಎಂದರು.
“ಇಮ್ರಾನ್ ಮಸೂದ್ ಅವರ ಹೇಳಿಕೆಗಳಿಂದ ರಾಹುಲ್ ಗಾಂಧಿಯ ಮೇಲಿನ ನಂಬಿಕೆ ಕಡಿಮೆಯಾಗಿದೆ ಎಂಬ ಸೂಚನೆ ಕಂಡುಬರುತ್ತಿದೆ. ಅವರ ಬದಲಿಗೆ ಪ್ರಿಯಾಂಕಾ ಗಾಂಧಿ ವಾದ್ರಾರನ್ನು ಮುಂದಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ರಾಬರ್ಟ್ ವಾದ್ರಾ ಅವರ ಹೇಳಿಕೆಗಳು ಬೆಂಬಲ ನೀಡುತ್ತಿವೆ,” ಎಂದು ಪೂನಾವಾಲಾ ಹೇಳಿದ್ದಾರೆ.