×
Ad

ಉನ್ನಾವ್ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ತಾಯಿಯಿಂದ ವಿಪಕ್ಷ ನಾಯಕ ರಾಹುಲ್ ಗಾಂಧಿ ಭೇಟಿ

Update: 2025-12-24 20:39 IST

 ರಾಹುಲ್ ಗಾಂಧಿ | Photo Credit ; NDTV 

ಹೊಸದಿಲ್ಲಿ: ಉನ್ನಾವ್ ಅತ್ಯಾಚಾರ ಪ್ರಕರಣದ ದೋಷಿ, ಬಿಜೆಪಿಯ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಅಮಾನತು ಮಾಡಿರುವ ದೆಹಲಿ ಹೈಕೋರ್ಟ್ ಕ್ರಮವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಸಂತ್ರಸ್ತೆ ಮತ್ತು ಆಕೆಯ ತಾಯಿ ಬುಧವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದರು.

ಈ ವೇಳೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕೂಡ ಹಾಜರಿದ್ದರು. ಸೋನಿಯಾ ಗಾಂಧಿಯವರ 10 ಜನಪಥ್ ನಿವಾಸದಲ್ಲಿ ಈ ಭೇಟಿ ನಡೆಯಿತು. ವಿದೇಶ ಪ್ರವಾಸದಿಂದ ವಾಪಸ್ಸಾದ ಮರುದಿನವೇ ರಾಹುಲ್ ಗಾಂಧಿ ಸಂತ್ರಸ್ತೆಯ ಕುಟುಂಬದೊಂದಿಗೆ ಮಾತುಕತೆ ನಡೆಸಿದರು.

ಸೆಂಗಾರ್ ನ ಜೀವಾವಧಿ ಶಿಕ್ಷೆ ಅಮಾನತು ವಿರೋಧಿಸಿ ಸಂತ್ರಸ್ತೆ ಹಾಗೂ ಆಕೆಯ ತಾಯಿ ದಿಲ್ಲಿಯಲ್ಲಿ ಪ್ರತಿಭಟನೆ ನಡೆಸಿದ ವೇಳೆ CRPF ಸಿಬ್ಬಂದಿ ಸಂತ್ರಸ್ತೆ ಮತ್ತು ಆಕೆಯ ತಾಯಿಯನ್ನು ಮಾಧ್ಯಮಗಳೊಂದಿಗೆ ಮಾತನಾಡದಂತೆ ತಡೆದಿದ್ದಾರೆ. ವೃದ್ಧ ಮಹಿಳೆಯನ್ನು ಚಲಿಸುತ್ತಿದ್ದ ಬಸ್ನಿಂದ ಹಾರುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ.

ಸೆಂಗಾರ್ ತನಗೆ ವಿಧಿಸಿರುವ ಶಿಕ್ಷೆಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದು, ನ್ಯಾಯಾಲಯವು ಮೇಲ್ಮನವಿಯ ವಿಚಾರಣೆ ಪೂರ್ಣಗೊಳ್ಳುವವರೆಗೆ ಜೈಲಿನಿಂದ ಹೊರಗಿರಲು ಅವಕಾಶ ನೀಡಿದೆ. ಈ ತೀರ್ಪು ದೇಶಾದ್ಯಂತ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ನಿಲುವನ್ನು ಕಟುವಾಗಿ ಟೀಕಿಸಿವೆ.

ಈ ಕುರಿತು ಸಾಮಾಜಿಕ ಜಾಲತಾಣದ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ರಾಹುಲ್ ಗಾಂಧಿ, ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ಕಾರಣಕ್ಕೆ ಸಂತ್ರಸ್ತೆ ದೌರ್ಜನ್ಯಕ್ಕೆ ಒಳಗಾಗಬೇಕೇ ಎಂದು ಪ್ರಶ್ನಿಸಿದ್ದಾರೆ. ಅತ್ಯಾಚಾರಿಗಳಿಗೆ ಜಾಮೀನು ನೀಡಲಾಗುತ್ತಿದ್ದು, ಸಂತ್ರಸ್ತರನ್ನು ಅಪರಾಧಿಗಳಂತೆ ನಡೆಸಿಕೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ನ್ಯಾಯಾಲಯದ ತೀರ್ಪಿನ ಬಳಿಕ, 2017ರಲ್ಲಿ ಸೆಂಗಾರ್ ನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆ ತನ್ನ ತಾಯಿ ಮತ್ತು ವಕೀಲೆ, ಸಾಮಾಜಿಕ ಕಾರ್ಯಕರ್ತೆ ಯೋಗಿತಾ ಭಯನಾ ಅವರೊಂದಿಗೆ ಇಂಡಿಯಾ ಗೇಟ್ ಬಳಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಅವರನ್ನು ವಶಕ್ಕೆ ಪಡೆಯಲಾಗಿತ್ತು.

ಬುಧವಾರ ಬೆಳಿಗ್ಗೆ ಸಂತ್ರಸ್ತೆ ತನ್ನ ತಾಯಿಯೊಂದಿಗೆ ಮಂಡಿ ಹೌಸ್ನಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಲು ಮುಂದಾದಾಗ ತಡೆದ, CRPF ಸಿಬ್ಬಂದಿ ಅವರನ್ನು ಬಸ್ ನಲ್ಲಿ ಕರೆದೊಯ್ದರು. ಮಂಡಿ ಹೌಸ್ ನಲ್ಲಿಯೂ ಅವರಿಗೆ ಮಾತನಾಡಲು ಅವಕಾಶ ನಿರಾಕರಿಸಿದರು. ಬಳಿಕ, ಪ್ರತಿಭಟನೆ ನಡೆಸಲು ಸಂತ್ರಸ್ತರಿಗೆ ಅನುಮತಿ ನೀಡಿಲ್ಲ ಎಂದು CRPF ಸ್ವಷ್ಟಪಡಿಸಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News