ಕೋಳಿ, ಆಡುಗಳದ್ದೂ ಜೀವವಲ್ಲವೇ?: ಬೀದಿ ನಾಯಿ ಪ್ರಿಯರ ಅರ್ಜಿಗೆ ಸುಪ್ರೀಂ ಕೋರ್ಟ್ ಪ್ರಶ್ನೆ
ಸುಪ್ರೀಂ ಕೋರ್ಟ್ | Photo Credit : PTI
ಹೊಸದಿಲ್ಲಿ,ಜ.7: ಬೀದಿನಾಯಿ ಪ್ರಿಯರು ಮಂಡಿಸಿದ ವಾದಗಳನ್ನು ಬುಧವಾರ ಪ್ರಶ್ನಿಸಿದ ಸರ್ವೋಚ್ಚ ನ್ಯಾಯಾಲಯವು,‘ಇತರ ಪ್ರಾಣಿಗಳ ಜೀವದ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕೋಳಿಗಳು ಮತ್ತು ಆಡುಗಳದ್ದೂ ಜೀವವಲ್ಲವೇ?’ಎಂದು ಕೇಳಿದೆ. ಬೀದಿನಾಯಿಗಳ ನಿರ್ವಹಣೆ ಕುರಿತು ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಕೈಗೆತ್ತಿಕೊಂಡಿತ್ತು.
‘ಎಲ್ಲ ಬೀದಿನಾಯಿಗಳನ್ನು ದೊಡ್ಡಿಗಳಲ್ಲಿ ಕೂಡಿಹಾಕುವ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ನಾಯಿಗಳು ಇಲ್ಲದಿದ್ದರೆ ತ್ಯಾಜ್ಯ ಮತ್ತು ಕೋತಿಗಳ ಸಮಸ್ಯೆಯನ್ನು ನಾವು ಹೇಗೆ ಎದುರಿಸುತ್ತೇವೆ?’ ಎಂದು ಪ್ರಾಣಿ ಹಕ್ಕು ಕಾರ್ಯಕರ್ತನೋರ್ವ ನಿವೇದಿಸಿಕೊಂಡಾಗ ಸರ್ವೋಚ್ಚ ನ್ಯಾಯಾಲಯವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.
ಕಳೆದ ವರ್ಷ ಬೀದಿನಾಯಿಗಳ ದಾಳಿಗೆ ತುತ್ತಾಗಿದ್ದ ಎಂಟರ ಹರೆಯದ ಬಾಲಕಿಯೋರ್ವಳ ತಂದೆ ವಿಚಾರಣೆ ವೇಳೆ ಉಪಸ್ಥಿತರಿದ್ದು,ಕಳೆದ ವರ್ಷ ಬೀದಿನಾಯಿಗಳು ಎಂಟರ ಹರೆಯದ ಮಗುವೊಂದನ್ನು ಕೊಂದ ಇನ್ನೊಂದು ಘಟನೆಯೂ ಸಂಭವಿಸಿತ್ತು. ಬೀದಿನಾಯಿಗಳ ಬಗ್ಗೆ ದೂರುಗಳನ್ನು ನೀಡಿದ್ದರೂ ನೋಯ್ಡಾ ಪ್ರಾಧಿಕಾರವು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು. ನಿವಾಸಿ ಕಲ್ಯಾಣ ಸಂಘಗಳು ತಮ್ಮ ಸೊಸೈಟಿಗಳನ್ನು ‘ನಾಯಿ ನಿಷೇಧಿತ ವಲಯಗಳು’ ಎಂದು ಘೋಷಿಸಲು ಅನುಮತಿ ನೀಡಬೇಕು ಎಂದೂ ಅವರು ವಾದಿಸಿದರು.
ಪ್ರಕರಣದಲ್ಲಿ ಬೀದಿನಾಯಿ ಪ್ರಿಯರ ಪರವಾಗಿ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ‘ನಾಯಿಪ್ರಿಯರು ಮತ್ತು ಪರಿಸರ ಪ್ರಿಯರಾಗಿ ನಾವು ಇಲ್ಲಿದ್ದೇವೆ’ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸರ್ವೋಚ್ಚ ನ್ಯಾಯಾಲಯವು, ‘ಇತರ ಪ್ರಾಣಿಗಳ ಜೀವದ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕೋಳಿಗಳು ಮತ್ತು ಆಡುಗಳದ್ದೂ ಜೀವವಲ್ಲವೇ?’ಎಂದು ಪ್ರಶ್ನಿಸಿತು.
‘ನಾನು ಕೋಳಿ ತಿನ್ನುವುದನ್ನು ನಿಲ್ಲಿಸಿದ್ದೇನೆ. ಏಕೆಂದರೆ ಅವುಗಳನ್ನು ಕ್ರೂರ ರೀತಿಯಲ್ಲಿ ಪಂಜರಗಳಲ್ಲಿ ಇಡಲಾಗುತ್ತದೆ. ಒಂದು ಹುಲಿ ನರಭಕ್ಷಕ ಎಂದ ಮಾತ್ರಕ್ಕೆ ಎಲ್ಲ ಹುಲಿಗಳನ್ನು ಕೊಲ್ಲಬೇಕಿಲ್ಲ’ ಎಂದು ಸಿಬಲ್ ಉತ್ತರಿಸಿದರು.
ವಿಶ್ವಾದ್ಯಂತ ಬೀದಿನಾಯಿಗಳ ಸೆರೆ ಹಿಡಿಯುವಿಕೆ, ಸಂತಾನಶಕ್ತಿ ಹರಣ, ಲಸಿಕೆ ಹಾಕುವಿಕೆ ಮತ್ತು ಬಿಡುಗಡೆಯ (ಸಿಎಸ್‌ವಿಆರ್) ಮಾದರಿಯನ್ನು ಅನುಸರಿಸಲಾಗುತ್ತಿದೆ. ಇದು ನಗರಗಳಲ್ಲಿ ನಾಯಿಗಳ ಸಂಖ್ಯೆಯನ್ನು ಬಹುತೇಕ ಶೂನ್ಯಕ್ಕೆ ಇಳಿಸಿದೆ ಮತ್ತು ಯಶಸ್ವಿಯಾಗಿದೆ ಎಂದು ಕಪಿಲ್ ಸಿಬಲ್ ಹೇಳಿದರು.