ನ್ಯಾ. ಯಶವಂತ ವರ್ಮಾ ವಿರುದ್ಧ ವಿಚಾರಣಾ ಸಮಿತಿ ರಚಿಸುವ ಸ್ಪೀಕರ್ ಅಧಿಕಾರಕ್ಕೆ ಸುಪ್ರೀಂ ಕೋರ್ಟ್ ಬೆಂಬಲ
ಓಂ ಬಿರ್ಲಾ , ಯಶವಂತ ವರ್ಮಾ | Photo Credit : PTI
ಹೊಸದಿಲ್ಲಿ: ನ್ಯಾಯಾಧೀಶರ ವಿಚಾರಣೆ ಕಾಯ್ದೆಯಡಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಅಲಹಾಬಾದ್ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಯಶವಂತ ವರ್ಮಾರ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಪರಿಶೀಲನೆಗಾಗಿ ವಿಚಾರಣಾ ಸಮಿತಿಯನ್ನು ರಚಿಸಲು ಯಾವುದೇ ನಿರ್ಬಂಧವಿಲ್ಲ. ನ್ಯಾ.ವರ್ಮಾ ವಿರುದ್ಧ ವಾಗ್ದಂಡನೆ ಪ್ರಸ್ತಾವವನ್ನು ರಾಜ್ಯಸಭೆ ತಿರಸ್ಕರಿಸಿದರೂ ಲೋಕಸಭೆಯು ಆ ವಿಷಯದಲ್ಲಿ ಮುಂದುವರಿಯಬಹುದಲ್ಲವೇ ಎಂದು ಸರ್ವೋಚ್ಚ ನ್ಯಾಯಾಲಯವು ಬುಧವಾರ ಮೌಖಿಕವಾಗಿ ಅಭಿಪ್ರಾಯವನ್ನು ವ್ಯಕ್ತಪಡಿಸಿತು.
ಮೇಲ್ನೋಟದ ಅಭಿಪ್ರಾಯವನ್ನು ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ದೀಪಂಕರ ದತ್ತಾ ಮತ್ತು ಸತೀಶಚಂದ್ರ ಶರ್ಮಾ ಅವರ ಪೀಠವು, ಸಭಾಪತಿ ಜಗದೀಪ ಧನ್ಕರ್ ಅವರ ರಾಜೀನಾಮೆಯ ಬಳಿಕ ವಾಗ್ದಂಡನೆ ನಿರ್ಣಯವನ್ನು ತಿರಸ್ಕರಿಸುವ ಅಧಿಕಾರ ಉಪ ಸಭಾಪತಿಗಳಿಗೆ ಇರಲಿಲ್ಲ ಎಂಬ ರೋಹಟ್ಗಿ ಅವರ ವಾದ ತನಗೆ ತೃಪ್ತಿಯನ್ನುಂಟು ಮಾಡಿಲ್ಲ ಎಂದು ಹೇಳಿತು.
ಇದೇ ವೇಳೆ ಪೀಠವು ಲೋಕಸಭಾ ಸ್ಪೀಕರ್ ವಿಚಾರಣಾ ಸಮಿತಿಯನ್ನು ರಚಿಸಿದ ವಿಧಾನದಲ್ಲಿ ಕೆಲವು ದೋಷಗಳಿದ್ದಂತೆ ಕಾಣುತ್ತಿದೆ ಮತ್ತು ಅವು ವಿಚಾರಣಾ ಪ್ರಕ್ರಿಯೆಯನ್ನು ಅಂತ್ಯಗೊಳಿಸುವಷ್ಟು ಗಂಭೀರವಾಗಿವೆಯೇ ಎನ್ನುವುದನ್ನು ತಾನು ಪರಿಶೀಲಿಸುವುದಾಗಿ ತಿಳಿಸಿತು.