AAP ಸರಕಾರದ ಕ್ರಮದಿಂದ ಪಂಜಾಬ್ ಕೇಸರಿಗೆ ಮಧ್ಯಂತರ ಪರಿಹಾರ ನೀಡಿದ ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ | Photo Credit : PTI
ಹೊಸದಿಲ್ಲಿ, ಜ.20: ಪಂಜಾಬ್ ಕೇಸರಿ ಮಾಧ್ಯಮ ಸಮೂಹವು ಲೂಧಿಯಾನಾದಲ್ಲಿರುವ ತನ್ನ ಮುದ್ರಣಾಲಯದಲ್ಲಿ ಕಾರ್ಯಾಚರಣೆಗಳನ್ನು ಪುನರಾರಂಭಿಸಲು ಅವಕಾಶ ನೀಡುವಂತೆ ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಪಂಜಾಬ್ ಸರಕಾರಕ್ಕೆ ನಿರ್ದೇಶನ ನೀಡಿದೆ.
ಮಾಧ್ಯಮ ಸಮೂಹವು ಸಲ್ಲಿಸಿರುವ ಅರ್ಜಿಯನ್ನು ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯವು ಇತ್ಯರ್ಥಗೊಳಿಸುವವರೆಗೆ, ಪಂಜಾಬ್ ಕೇಸರಿ ಪತ್ರಿಕೆಯ ಪ್ರಕಟಣೆಯ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ಕೈಗೊಳ್ಳದಂತೆ ನ್ಯಾಯಾಲಯವು ಸರಕಾರಕ್ಕೆ ತಾಕೀತು ಮಾಡಿತು.
ಜಲಮಾಲಿನ್ಯಕ್ಕೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ, ಪಂಜಾಬ್ ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶದ ಮೇರೆಗೆ ಜ.15ರಂದು ಮುದ್ರಣಾಲಯವನ್ನು ಮುಚ್ಚಲಾಗಿತ್ತು.
ಆಡಳಿತಾರೂಢ ಆಮ್ ಆದ್ಮಿ ಪಾರ್ಟಿಯ (ಆಪ್) ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಕುರಿತು ತನ್ನ ವರದಿಯೇ ಸರಕಾರದ ಕ್ರಮಕ್ಕೆ ಕಾರಣವಾಗಿದೆ ಎಂದು ಪಂಜಾಬ್ ಕೇಸರಿ ಸಮೂಹ ಆರೋಪಿಸಿದೆ.
ಸಮೂಹವು ಪಂಜಾಬ್ ಕೇಸರಿ, ಜಗ್ ಬಾಣಿ ಮತ್ತು ಹಿಂದ್ ಸಮಾಚಾರ್ ಸೇರಿದಂತೆ ರಾಜ್ಯದಲ್ಲಿ ಅತಿ ಹೆಚ್ಚಿನ ಪ್ರಸಾರವನ್ನು ಹೊಂದಿರುವ ಕೆಲವು ಪತ್ರಿಕೆಗಳನ್ನು ಪ್ರಕಟಿಸುತ್ತಿದೆ.
ಮಂಗಳವಾರ ಹಿರಿಯ ವಕೀಲ ಮುಕುಲ್ ರೋಹಟ್ಗಿ ಅವರು ಜಗತ್ ವಿಜಯ ಪ್ರಿಂಟರ್ಸ್ ಮತ್ತು ಹಿಂದ್ ಸಮಾಚಾರ್ ಲಿ. ಸಲ್ಲಿಸಿರುವ ಅರ್ಜಿಯನ್ನು ತುರ್ತು ವಿಚಾರಣೆಗೆ ಉಲ್ಲೇಖಿಸಿದ ಬಳಿಕ, ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜಾಯಮಾಲ್ಯ ಬಾಗ್ಚಿ ಮತ್ತು ವಿ.ಎಂ. ಪಂಚೋಲಿ ಅವರ ಪೀಠವು ಮುದ್ರಣಾಲಯದಲ್ಲಿ ಕಾರ್ಯಾಚರಣೆಗಳನ್ನು ಪುನರಾರಂಭಿಸುವಂತೆ ನಿರ್ದೇಶನ ನೀಡಿತು.
ಹಿಂದ್ ಸಮಾಚಾರ್ ಲಿ. ಪಂಜಾಬ್ ಕೇಸರಿ ಸಮೂಹದ ಮಾತೃ ಸಂಸ್ಥೆಯಾಗಿದ್ದರೆ, ಜಗತ್ ವಿಜಯ ಪ್ರಿಂಟರ್ಸ್ ಸಮೂಹದ ಮುಖ್ಯ ಮುದ್ರಣ ಘಟಕವಾಗಿದೆ.
ರಾಜ್ಯ ಸರಕಾರವನ್ನು ಟೀಕಿಸಿದ ಕೆಲವು ಲೇಖನಗಳನ್ನು ಪ್ರಕಟಿಸಿದ ಬಳಿಕ ಪಂಜಾಬ್ ಕೇಸರಿ ಸಮೂಹದ ಆಡಳಿತಕ್ಕೆ ಕಿರುಕುಳ ಆರಂಭಗೊಂಡಿತ್ತು. ವಿದ್ಯುತ್ ಕಡಿತ, ಮುದ್ರಣಾಲಯದ ವಿರುದ್ಧ ಮಾಲಿನ್ಯ ನಿಯಂತ್ರಣ ಮಂಡಳಿಯ ನೋಟಿಸ್‌ಗಳು, ಸಮೂಹ ನಡೆಸುತ್ತಿರುವ ಹೋಟೆಲ್‌ಗಳ ಮುಚ್ಚುಗಡೆ ಮತ್ತು ಎಫ್‌ಐಆರ್‌ಗಳ ದಾಖಲು ಇತ್ಯಾದಿಗಳು ಇದರಲ್ಲಿ ಒಳಗೊಂಡಿವೆ ಎಂದು ರೋಹಟ್ಗಿ ನ್ಯಾಯಾಲಯಕ್ಕೆ ತಿಳಿಸಿದರು.
ತನ್ನ ಹೋಟೆಲ್ ಮತ್ತು ಮುದ್ರಣಾಲಯವನ್ನು ಮುಚ್ಚಿರುವುದನ್ನು ಪ್ರಶ್ನಿಸಿ ಸಮೂಹವು ಸಲ್ಲಿಸಿರುವ ಇಂತಹುದೇ ಅರ್ಜಿಗಳ ಮೇಲೆ ತೀರ್ಪನ್ನು ಸೋಮವಾರ ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯವು ಕಾಯ್ದಿರಿಸಿದೆ. ಆದರೆ ಯಾವುದೇ ಮಧ್ಯಂತರ ಪರಿಹಾರವನ್ನು ಒದಗಿಸಿಲ್ಲ ಎಂದು ರೋಹಟಗಿ ಸರ್ವೋಚ್ಚ ನ್ಯಾಯಾಲಯದ ಗಮನಕ್ಕೆ ತಂದಿದ್ದರು.