×
Ad

ಮನೆ ಕೆಲಸದ ಕಾರ್ಮಿಕರ ಯೋಗಕ್ಷೇಮದ ಖಾತರಿಗೆ ನಿರ್ದೇಶನ ನೀಡಲು ಸುಪ್ರೀಂ ಕೋರ್ಟ್ ನಕಾರ

Update: 2026-01-29 20:57 IST

ಸುಪ್ರೀಂ ಕೋರ್ಟ್ | Photo Credit : PTI 

ಹೊಸದಿಲ್ಲಿ, ಜ. 29: ಮನೆ ಕೆಲಸದ ಕಾರ್ಮಿಕರಿಗೆ ಸಮಗ್ರ ಕಾನೂನು ಚೌಕಟ್ಟು ಹಾಗೂ ಕನಿಷ್ಠ ವೇತನ ಜಾರಿಗೊಳಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ.

ಅಸ್ತಿತ್ವದಲ್ಲಿರುವ ಕಾನೂನುಗಳ ತಿದ್ದುಪಡಿಗೆ ಪರಿಶೀಲಿಸುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ನಿರ್ದೇಶಿಸಿ ರಿಟ್ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಕನಿಷ್ಠ ವೇತನ ನಿಗದಿಯು ಕೆಲಸ ಕೊಡುವವರನ್ನು ಸಂಕಷ್ಟಕ್ಕೆ ತಳ್ಳಬಹುದು ಎಂದು ಕಳವಳ ವ್ಯಕ್ತ ಪಡಿಸಿದ ಸುಪ್ರೀಂ ಕೋಟ್, ಕಾರ್ಮಿಕ ಸಂಘಗಳು ಪ್ರತಿಯೊಂದು ಮನೆಯ ವಿರುದ್ಧ ಮೊಕದ್ದಮೆ ದಾಖಲಿಸಬಹುದು ಮತ್ತು ಇದು ಮನೆಗೆಲಸದವರನ್ನು ನೇಮಿಸಿಕೊಳ್ಳುವಲ್ಲಿ ಹಿಂಜರಿಕೆಗೆ ಕಾರಣವಾಗಬಹುದು ಎಂದು ಹೇಳಿದೆ.

ದೇಶಾದ್ಯಂತ ಲಕ್ಷಾಂತರ ಮನೆ ಕೆಲಸದವರ ದುಃಸ್ಥಿತಿಯನ್ನು ಒಪ್ಪಿಕೊಂಡಿರುವ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಾಧೀಶರಾದ ಜೋಯ್ಮಾಲ ಬಾಗ್ಚಿ ಅವರನ್ನು ಒಳಗೊಂಡ ಪೀಠ, ಕಾನೂನು ತಿದ್ದುಪಡಿ ಆದೇಶಿಸಲು ನ್ಯಾಯಾಂಗ ಶಾಸಕಾಂಗದಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ.

ದೇಶದಲ್ಲಿ ಕೈಗಾರಿಕೆಗಳ ಬೆಳವಣಿಗೆ ನಿಲ್ಲಲು ಕಾರ್ಮಿಕ ಹೋರಾಟಗಳು ಕಾರಣ ಎಂದು ನ್ಯಾಯಾಲಯ ಅಭಿಪ್ರಾಯಿಸಿದೆ.

‘‘ಕಾರ್ಮಿಕ ಸಂಘಟನೆಗಳಿಂದ ದೇಶದಲ್ಲಿ ಎಷ್ಟು ಕೈಗಾರಿಕಾ ಘಟಕಗಳು ಮುಚ್ಚಿವೆ? ವಾಸ್ತವವನ್ನು ತಿಳಿದುಕೊಳ್ಳೋಣ. ಈ ಸಂಘಟನೆಗಳ ಚಟುವಟಿಕೆಗಳಿಂದಾಗಿ ದೇಶಾದ್ಯಂತ ಅನೇಕ ಸಾಂಪ್ರದಾಯಿಕ ಕೈಗಾರಿಕೆಗಳು ಮುಚ್ಚಿವೆ. ಅವರು ಕೆಲಸ ಮಾಡಲು ಬಯಸುವುದಿಲ್ಲ. ದೇಶದಲ್ಲಿ ಕೈಗಾರಿಕೆಯ ಬೆಳವಣಿಗೆ ನಿಲ್ಲಲು ಈ ಕಾರ್ಮಿಕ ಸಂಘಟನೆಗಳ ನಾಯಕರು ಕಾರಣ’’ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ತಿಳಿಸಿದ್ದಾರೆ.

‘‘ಅಲ್ಲಿ ಶೋಷಣೆ ಖಂಡಿತ ಇದೆ. ಆದರೆ, ಅದನ್ನು ಪರಿಹರಿಸಲು ಮಾರ್ಗಗಳಿವೆ. ಜನರಿಗೆ ಅವರ ವೈಯಕ್ತಿಕ ಹಕ್ಕುಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕಿತ್ತು. ಜನರನ್ನು ಹೆಚ್ಚು ಕೌಶಲ್ಯಪೂರ್ಣರನ್ನಾಗಿ ಮಾಡಬೇಕಿತ್ತು. ಇನ್ನೂ ಹಲವು ಸುಧಾರಣೆಗಳನ್ನು ಮಾಡಬೇಕಿತ್ತು’’ ಎಂದು ಅವರು ಹೇಳಿದ್ದಾರೆ.

ಆದರೆ, ಮನೆ ಕೆಲಸದಾಳುಗಳ ಸಂಕಷ್ಟಗಳ ಬಗ್ಗೆ ರಾಜ್ಯ ಸರಕಾರಗಳು ಹಾಗೂ ಕೇಂದ್ರ ಸರಕಾರದ ಗಮನ ಸೆಳೆಯುವಂತೆ ಹಾಗೂ ಈ ಕುರಿತು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸರಕಾರಗಳನ್ನು ಸಂಪರ್ಕಿಸುವಂತೆ ಪೆಣ್ ತೊಯಿಲಾಲರ್ಗಳ್ ಸಂಗಂ ಸೇರಿದಂತೆ ಅರ್ಜಿದಾರರಿಗೆ ಪೀಠ ಸೂಚಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News