ಮೂರು ಬಾರಿ ಎಂಬಿಬಿಎಸ್ ಗೆ ತಿರಸ್ಕೃತ ಅಂಗವಿಕಲ ಅಭ್ಯರ್ಥಿಗೆ ಏಮ್ಸ್ ಪ್ರವೇಶ ನೀಡಲು ಸುಪ್ರೀಂ ಸೂಚನೆ
PC: PTI
ಹೊಸದಿಲ್ಲಿ: ಎಂಬಿಬಿಎಸ್ ಕಲಿಯಲು ಅನರ್ಹ ಎಂದು ವೈದ್ಯಕೀಯ ಮಂಡಳಿಗಳಿಂದ ಮೂರು ಬಾರಿ ತಿರಸ್ಕೃತಗೊಂಡ ಕಬೀರ್ ಪಹಾರಿಯಾ ಎಂಬ ಅಂಗವಿಲಕ ವೈದ್ಯಕೀಯ ಆಕಾಂಕ್ಷಿಗೆ 2025-26ನೇ ಶೈಕ್ಷಣಿಕ ವರ್ಷದಲ್ಲಿ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್)ನಲ್ಲಿ ಪ್ರವೇಶ ನೀಡಲು ಸುಪ್ರೀಂಕೋರ್ಟ್ ಆದೇಶ ನೀಡಿದೆ.
ಸುಪ್ರೀಂಕೋರ್ಟ್ ಆದೇಶದ ಬಳಿಕ ರಚನೆಯಾದ ನಾಲ್ಕನೇ ವೈದ್ಯಕೀಯ ಮಂಡಳಿ, ಕಬೀರ್ ಏಮ್ಸ್ ಪ್ರವೇಶ ಪಡೆಯಲು ಅರ್ಹರು ಎಂದು ಏಪ್ರಿಲ್ 24ರ ವರದಿಯಲ್ಲಿ ಪ್ರಕಟಿಸಿದೆ. 2024-25ರ ವೈದ್ಯಕೀಯ ಪ್ರವೇಶದಲ್ಲಿ ಎಸ್ಸಿ ಅಂಗವಿಲಕ ಕೋಟಾದಲ್ಲಿ ಕಬೀರ್ ಗಿಂತ ಕಡಿಮೆ ಅಂಕ ಪಡೆದ ಅಭ್ಯರ್ಥಿಗೆ ವೈದ್ಯಕೀಯ ಪ್ರವೇಶ ನೀಡಿದ್ದನ್ನು ಸುಪ್ರೀಂಕೋರ್ಟ್ ಗಮನಿಸಿದೆ.
ಈಗಾಗಲೇ 2024-25ನೇ ಶೈಕ್ಷಣಿಕ ವರ್ಷದ ಬ್ಯಾಚ್ ಸಾಕಷ್ಟು ಮುಂದುವರಿದಿರುವ ಹಿನ್ನೆಲೆಯಲ್ಲಿ ಆ ವರ್ಷಕ್ಕೆ ವಿದ್ಯಾರ್ಥಿಗೆ ಪ್ರವೇಶ ಮಂಜೂರು ಮಾಡುವುದು ಸಮರ್ಪಕವಾಗದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. 2024ರ ನೀಟ್ ಯುಜಿ ಪರೀಕ್ಷೆಯಲ್ಲಿ ಕಬೀರ್ ಉತ್ತಮ ಅಂಕ (720ಕ್ಕೆ 542) ಪಡೆದಿರುವ ಹಿನ್ನೆಲೆಯಲ್ಲಿ 2025ರ ಪ್ರವೇಶ ಪರೀಕ್ಷೆ ಬರೆಯುವ ಅಗತ್ಯವಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಕಬೀರ್ ಗೆ ಸೀಟು ನಿರಾಕರಿಸಿರುವ ಕ್ರಮ ಕಾನೂನುಬಾಹಿರ ಮತ್ತು ಬೇಕಾಬಿಟ್ಟಿ ಕ್ರಮ; ಜತೆಗೆ ಆತನ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಕೋರ್ಟ್ ಹೇಳಿದೆ. "ಇಂಥ ಕ್ರಮ ಸಾಂಸ್ಥಿಕ ಪಕ್ಷಪಾತ ಮತ್ತು ವ್ಯವಸ್ಥಿತ ತಾರತಮ್ಯವನ್ನು ಪ್ರತಿಫಲಿಸುವುದು ಮಾತ್ರವಲ್ಲದೇ, ಸಂವಿಧಾನದ ಚೌಕಟ್ಟಿನಲ್ಲಿ ಹೇಳಲಾದ ಸಮಾನ ಅವಕಾಶ ಹಾಗೂ ತಾರತಮ್ಯ ರಹಿತ ನೀತಿಯನ್ನು ಕಡೆಗಣಿಸುವಂಥದ್ದು" ಎಂದು ಆದೇಶದಲ್ಲಿ ವಿವರಿಸಿದೆ.
ಕಬೀರ್ ಪಹಾರಿಯಾ 10ನೇ ತರಗತಿಯಲ್ಲಿ ಶೇಕಡ 91.5 ಹಾಗೂ 12ನೇ ತರಗತಿಯಲ್ಲಿ ಯಾವ ಬರಹ ಸಹಾಯಕನ ನೆರವೂ ಇಲ್ಲದೇ ಶೇಕಡ 90 ಅಂಕಗಳನ್ನು ಪಡೆದಿದ್ದರು. ಕಬೀರ್ ನ ಅಂಗವೈಕಲ್ಯವನ್ನು (ಕೈ ಮತ್ತು ಕಾಲುಗಳಲ್ಲಿ ಬಹು ಬೆರಳುಗಳು ಇಲ್ಲದಿರುವುದು ಮೇಲ್ನೋಟಕ್ಕೇ ಕಂಡುಬರುತ್ತದೆ. ಒಟ್ಟಾರೆ ಶೇಕಡ 42ರಷ್ಟು ಅಂಗವೈಕಲ್ಯ ಹೊಂದಿದ್ದಾನೆ" ಎನ್ನಲಾಗಿತ್ತು. ಎಡಗೈಯ ಮೂರು ಬೆರಳುಗಳು ಅರ್ಧಮಾತ್ರ ಬೆಳವಣಿಗೆ ಹೊಂದಿದ್ದು, ಬಲಗೈಯಲ್ಲಿ ಇಂಥ ಎರಡು ಬೆರಳುಗಳಿದ್ದವು. ಎಡಕಾಲಿನ ಎರಡು ಬೆರಳುಗಳು ಅರ್ಧ ಬೆಳವಣಿಗೆ ಹೊಂದಿದ್ದವು. ಈ ಹಿಂದಿನ ತೀರ್ಪುಗಳಲ್ಲಿ ನೀಡಿದ ಸೂಚನೆ ಅನ್ವಯ ರಾಷ್ಟ್ರೀಯ ವೈದ್ಯಕೀಯ ಮಂಡಳಿ ಮಾರ್ಗಸೂಚಿಯನ್ನು ಪರಿಷ್ಕರಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
2025-26ನೇ ಶೈಕ್ಷಣಿಕ ವರ್ಷದ ಕೌನ್ಸಿಲಿಂಗ್ ಆರಂಭವಾಗುವ ಎರಡೂವರೆ ತಿಂಗಳ ಮುನ್ನ ಈ ತೀರ್ಪು ಬಂದಿದೆ.