ಎಸ್ಐಆರ್: ನ್ಯಾಯಾಧೀಶರಿಗೆ ತರಬೇತಿ ಕುರಿತು ಪಶ್ಚಿಮ ಬಂಗಾಳದ ಆಕ್ಷೇಪವನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಣೆ
"ನಮ್ಮ ನ್ಯಾಯಾಂಗ ಅಧಿಕಾರಿಗಳ ಬಗ್ಗೆ ನಮಗೆ ತಿಳಿದಿದೆ, ಅವರು ಯಾರಿಂದಲೂ ಪ್ರಭಾವಿತರಾಗುವುದಿಲ್ಲ"
ಹೊಸದಿಲ್ಲಿ: ತನ್ನ ನ್ಯಾಯಾಂಗ ಅಧಿಕಾರಿಗಳ ಬಗ್ಗೆ ತನಗೆ ತಿಳಿದಿದೆ ಮತ್ತು ಅವರು ‘ಯಾವುದರಿಂದಲೂ ಪ್ರಭಾವಿತರಾಗುವುದಿಲ್ಲ’ ಎಂದು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಹೇಳಿತು.
ಚುನಾವಣಾ ಆಯೋಗವು ರಾಜ್ಯದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್ಐಆರ್) ನಿಯೋಜಿಸಲಾಗಿರುವ ನ್ಯಾಯಾಂಗ ಅಧಿಕಾರಿಗಳಿಗೆ ತರಬೇತಿ ಮಾರ್ಗಸೂಚಿಯನ್ನು ಹೊರಡಿಸಿದೆ ಎಂದು ಪಶ್ಚಿಮ ಬಂಗಾಳ ಸರಕಾರವು ಎಂದು ನಿವೇದಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯದ ಈ ಅಭಿಪ್ರಾಯ ಹೊರಬಿದ್ದಿದೆ.
ಪ.ಬಂಗಾಳ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ವಿಚಿತ್ರವೊಂದು ಸಂಭವಿಸಿದೆ. ಎಲ್ಲ ಕಾರ್ಯವಿಧಾನಗಳನ್ನು ಕಲಕತ್ತಾ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರು ಮತ್ತು ಸಮಿತಿಯು ನಿರ್ಧರಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದ್ದರೂ ಚುನಾವಣಾ ಆಯೋಗವು ಅವರಿಗೆ ತಿಳಿಯದೆ ನ್ಯಾಯಾಂಗ ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಿದೆ. ಅವರು ಯಾವುದನ್ನು ಒಪ್ಪಿಕೊಳ್ಳಬೇಕು ಮತ್ತು ಯಾವುದನ್ನು ಒಪ್ಪಿಕೊಳ್ಳಬಾರದು ಎಂಬ ಬಗ್ಗೆ ತರಬೇತಿ ಮಾರ್ಗಸೂಚಿಯನ್ನು ಹೊರಡಿಸಿದೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಮತ್ತು ನ್ಯಾ.ಜಾಯಮಾಲ್ಯ ಬಾಗ್ಚಿ ಅವರ ಪೀಠಕ್ಕೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಗಳು,ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆಗಾಗಿ ನಿಯೋಜಿತ ನ್ಯಾಯಾಂಗ ಅಧಿಕಾರಿಗಳು ತಮ್ಮದೇ ಆದ ನಿರ್ಧಾರವನ್ನು ಕೈಗೊಳ್ಳುತ್ತಾರೆ ಎಂದು ಹೇಳಿದರು.
‘ಈ ರೀತಿಯಲ್ಲಿ ನಾವು ವಿಚಾರಣೆ ನಡೆಸುವುದು ಸಾಧ್ಯವಿಲ್ಲ. ಇದಕ್ಕೆ ಒಂದು ಅಂತ್ಯವಿರಬೇಕು. ನಮ್ಮ ನ್ಯಾಯಾಂಗ ಅಧಿಕಾರಿಗಳ ಬಗ್ಗೆ ನಮಗೆ ತಿಳಿದಿದೆ. ಅವರು ಯಾರಿಂದಲೂ ಪ್ರಭಾವಿತರಾಗುವುದಿಲ್ಲ. ಯಾವ ದಾಖಲೆಗಳನ್ನು ಪರಿಶೀಲಿಸಬೇಕು ಎಂದು ನ್ಯಾಯಾಲಯವು ಅತ್ಯಂತ ಸ್ಪಷ್ಟವಾಗಿ ತಿಳಿಸಿದೆ’ ಎಂದು ಹೇಳಿದರು.
‘ನಮ್ಮ ಆದೇಶಗಳು ಹಗಲಿನ ಬೆಳಕಿನಂತೆ ಸ್ಪಷ್ಟವಾಗಿವೆ’ ಎಂದು ನ್ಯಾ.ಬಾಗ್ಚಿ ತಿಳಿಸಿದರು.
ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶಗಳನ್ನು ಚುನಾವಣಾ ಆಯೋಗ ಅಥವಾ ರಾಜ್ಯ ಸರಕಾರ ಮೀರುವುದಿಲ್ಲ ಎಂದು ಪೀಠವು ಸ್ಪಷ್ಟಪಡಿಸಿತು.