ಸಂಸತ್ತಿನಿಂದ ಸಾವರ್ಕರ್ ಭಾವಚಿತ್ರ ತೆಗೆಯುವಂತೆ ಕೋರಿದ್ದ ಅರ್ಜಿಗೆ ಸುಪ್ರೀಂ ಕೋರ್ಟ್ ತಿರಸ್ಕಾರ
‘ಕ್ಷುಲ್ಲಕ ಅರ್ಜಿಗಳನ್ನು’ ಸಲ್ಲಿಸಿದರೆ ದಂಡ ವಿಧಿಸುವ ಎಚ್ಚರಿಕೆ ನೀಡಿದ ನ್ಯಾಯಾಲಯ
ವಿ.ಡಿ.ಸಾವರ್ಕರ್ (Photo source: newindianexpress.com)
ಹೊಸದಿಲ್ಲಿ: ಸಂಸತ್ತು ಮತ್ತು ಇತರ ಸರಕಾರಿ ಸಂಸ್ಥೆಗಳಿಂದ ವಿ.ಡಿ.ಸಾವರ್ಕರ್ ಅವರ ಭಾವಚಿತ್ರಗಳನ್ನು ತೆಗೆದುಹಾಕುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ಬಗ್ಗೆ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದ ಸರ್ವೋಚ್ಚ ನ್ಯಾಯಾಲಯವು, ಇಂತಹ ‘ಕ್ಷುಲ್ಲಕ ಅರ್ಜಿಗಳನ್ನು’ ಸಲ್ಲಿಸಿದರೆ ದಂಡವನ್ನು ವಿಧಿಸುವ ಎಚ್ಚರಿಕೆ ನೀಡಿತು.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಹಾಗೂ ನ್ಯಾಯಮೂರ್ತಿಗಳಾದ ಜಾಯಮಾಲ್ಯ ಬಾಗ್ಚಿ ಮತ್ತು ವಿಪುಲ್ ಪಾಂಚೋಲಿ ಅವರ ಪೀಠವು ನಿವೃತ್ತ ಐಆರ್‌ಎಸ್ ಅಧಿಕಾರಿ ಬಾಲಸುಂದರಂ ಬಾಲಮುರುಗನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು.
ಅರ್ಜಿಯ ಕುರಿತು ಅಸಮಾಧಾನಗೊಂಡಿದ್ದ ನ್ಯಾ.ಸೂರ್ಯಕಾಂತ, ‘ನೀವು ಇಂತಹ ಕುಲ್ಲಕ ಅರ್ಜಿಯನ್ನು ಸಲ್ಲಿಸಿರುವಾಗ ನಿಮ್ಮ ಮನಃಸ್ಥಿತಿ ನಮಗೆ ಅರ್ಥವಾಗುತ್ತದೆ. ನಾವು ನಿಮ್ಮ ಮೇಲೆ ದಂಡ ಹೇರುತ್ತೇವೆ. ನೀವೇನು ಎಂದು ನೀವು ಅಂದುಕೊಂಡಿದ್ದೀರಿ?’ ಎಂದು ಪ್ರಶ್ನಿಸಿದರು.
ಸಾರ್ವಜನಿಕ ಹಿತಾಸಕ್ತಿಯಲ್ಲಿ ತಾನು ಈ ಅರ್ಜಿಯನ್ನು ಸಲ್ಲಿಸಿದ್ದೇನೆ ಎಂದು ಬಾಲಮುರುಗನ್ ಒತ್ತಿ ಹೇಳಿದಾಗ, ‘ನಾವು ನಿಮಗೆ ಒಂದು ಲಕ್ಷ ರೂ.ದಂಡವನ್ನು ವಿಧಿಸುತ್ತೇವೆ, ನಂತರ ಸಾರ್ವಜನಿಕ ಹಿತಾಸಕ್ತಿಯ ಅರ್ಥವೇನು ಎನ್ನುವುದನ್ನು ನಿಮಗೆ ತಿಳಿಸುತ್ತೇವೆ. ನೀವು ನ್ಯಾಯಾಲಯಗಳ ಸಮಯವನ್ನು ವ್ಯರ್ಥ ಮಾಡುತ್ತಲೇ ಇರುತ್ತೀರಿ’ ಎಂದು ನ್ಯಾ.ಸೂರ್ಯಕಾಂತ ಎಚ್ಚರಿಸಿದರು.
ನೀವು ಅರ್ಜಿಯನ್ನು ಹಿಂದೆಗೆದುಕೊಳ್ಳುತ್ತಿರೋ ಅಥವಾ ದಂಡವನ್ನು ಎದುರಿಸಲು ಬಯಸುತ್ತೀರೋ ಎಂದು ಪೀಠವು ಪ್ರಶ್ನಿಸಿದಾಗ, ಅರ್ಜಿದಾರರು ಅರ್ಜಿಯನ್ನು ಹಿಂದೆಗೆದುಕೊಳ್ಳುವುದಾಗಿ ತಿಳಿಸಿದರು.
ಅರ್ಜಿಯನ್ನು ಹಿಂದೆಗೆದುಕೊಳ್ಳಲು ಅನುಮತಿ ನೀಡಿದ ನ್ಯಾ.ಸೂರ್ಯಕಾಂತ, ಈಗ ನಿಮ್ಮ ನಿವೃತ್ತಿಯ ದಿನಗಳನ್ನು ಆನಂದಿಸಿ, ಸಮಾಜದಲ್ಲಿ ಏನಾದರೂ ರಚನಾತ್ಮಕ ಪಾತ್ರ ವಹಿಸಿ ಎಂದು ತಿಳಿಸಿದರು.