ಪಹಲ್ಗಾಮ್ ದಾಳಿಯ ಹಿಂದಿನ ದಿನ ಶಂಕಿತ ಭಯೋತ್ಪಾದಕ ತನ್ನೊಂದಿಗೆ ಮಾತನಾಡಿದ್ದ: ಮಹಾರಾಷ್ಟ್ರದ ವ್ಯಕ್ತಿ ಪ್ರತಿಪಾದನೆ
PC : PTI
ಜಲ್ನಾ: ಪಹಲ್ಗಾಮ್ ಭಯೋತ್ಪಾದಕ ದಾಳಿ ಪ್ರಕರಣದ ಶಂಕಿತ ದಾಳಿಕೋರರಲ್ಲಿ ಓರ್ವ ಘಟನೆಯ ಹಿಂದಿನ ದಿನ ತನ್ನೊಂದಿಗೆ ಮಾತನಾಡಿದ್ದ ಎಂದು ಕಾಶ್ಮೀರದಿಂದ ಇತ್ತೀಚೆಗೆ ಹಿಂದಿರುಗಿದ ಮಹಾರಾಷ್ಟ್ರದ ಜಲ್ನಾ ನಗರದ ಯುವಕನೋರ್ವ ಹೇಳಿದ್ದಾನೆ.
‘‘ನೀವು ಹಿಂದೂವೇ? ನೀವು ಕಾಶ್ಮೀರದವರಂತೆ ಕಾಣುತ್ತಿಲ್ಲ’’ ಎಂದು ಎಪ್ರಿಲ್ 21ರಂದು ಬೈಸರನ್ ಕಣಿವೆಯ ‘ಮ್ಯಾಗಿ ಸ್ಟಾಲ್’ನಲ್ಲಿ ತನ್ನೊಂದಿಗಿನ ಆ ವ್ಯಕ್ತಿಯ ಸಂವಹನವನ್ನು ಜಲ್ನಾ ನಗರದ ಆದರ್ಶ್ ರಾವತ್ ನೆನಪಿಸಿಕೊಂಡಿದ್ದಾರೆ.
ಪ್ರವಾಸಿಗರ ಹತ್ಯಾಕಾಂಡ ನಡೆದ ದಿನದ ಬಳಿಕ ಭದ್ರತಾ ಸಂಸ್ಥೆಗಳು ಮೂವರು ಶಂಕಿತ ದಾಳಿಕೋರರ ರೇಖಾಚಿತ್ರವನ್ನು ಬಿಡುಗಡೆ ಮಾಡಿತು. ಅವುಗಳಲ್ಲಿ ಒಂದು ತನ್ನೊಂದಿಗೆ ಮಾತನಾಡಿದ್ದ ವ್ಯಕ್ತಿಗೆ ಹೋಲಿಕೆಯಾಗುತ್ತಿತ್ತು ಎಂದು ರಾವತ್ ಮಂಗಳವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಎಪ್ರಿಲ್ 21ರಂದು ಪಹಾಲ್ಗಾಮ್ ನಲ್ಲಿ ಕುದುರೆ ಸವಾರಿಗೆ ಹೋಗಿದ್ದೆ. ಉಪಾಹಾರ ಸೇವಿಸಲು ಅಲ್ಲಿರುವ ‘‘ಮ್ಯಾಗಿ ಸ್ಟಾಲ್’’ನ ಸಮೀಪ ಕುದುರೆ ನಿಲ್ಲಿಸಿದೆ. ಈ ಸಂದರ್ಭ ಆ ವ್ಯಕ್ತಿ ನನ್ನನ್ನು ಸಂಪರ್ಕಿಸಿದ್ದಾನೆ. ನೀವು ಹಿಂದೂವೇ ಎಂದು ಕೇಳಿದ್ದಾನೆ. ನೀವು ಕಾಶ್ಮೀರಿಯಂತೆ ಕಾಣುತ್ತಿಲ್ಲ ಎಂದು ಕೂಡ ಆತ ಹೇಳಿದ್ದಾನೆ. ಅನಂತರ ಆತ ತನ್ನ ಸಹವರ್ತಿಯತ್ತ ತಿರುಗಿದ ಹಾಗೂ ‘‘ಇಂದು ಜನಸಂದಣಿ ಕಡಿಮೆ ಇದೆ ಎಂದು ಹೇಳಿದ’’ ಎಂದು ರಾವತ್ ಹೇಳಿದ್ದಾರೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಿಡುಗಡೆಗೊಳಿಸಿದ ರೇಖಾಚಿತ್ರವನ್ನು ನೋಡಿದ ಬಳಿಕ ತನಗೆ ಘಟನೆಗಳು ನೆನಪಾದವು. ಕಾಶ್ಮೀರದಲ್ಲಿ ತನಗಾದ ಅನುಭವವನ್ನು ಇಮೇಲ್ ಮೂಲಕ ಎನ್‌ಐಎಗೆ ತಿಳಿಸಿದ್ದೇನೆ ಎಂದು ಅವರು ಹೇಳಿದ್ದಾರೆ.
‘‘ನನಗೆ ನೆನಪಿರುವುದೆಲ್ಲವನ್ನು ಬರೆದಿದ್ದೇನೆ. ನೆಟ್‌ವರ್ಕ್ ಸಮಸ್ಯೆಯಿಂದ ನನಗೆ ಮ್ಯಾಗಿ ಸ್ಟಾಲ್‌ನ ಮಾಲಿಕನಿಗೆ ಆರಂಭದಲ್ಲಿ ಹಣ ಪಾವತಿಸಲು ಸಾಧ್ಯವಾಗಲಿಲ್ಲ. ನಾನು ಆತನ ಮೊಬೈಲ್ ನಂಬರ್ ತೆಗೆದುಕೊಂಡೆ ಹಾಗೂ ಬೆಟ್ಟದಿಂದ ಕೆಳಗೆ ಬಂದ ಬಳಿಕ ಪಾವತಿಸಿದೆ. ಇದನ್ನು ಕೂಡ ಉಲ್ಲೇಖಿಸಿದ್ದೇನೆ’’ ಎಂದು ರಾವತ್ ಹೇಳಿದ್ದಾರೆ.