×
Ad

ಉತ್ತರ ಪ್ರದೇಶ | ಅಂಬೇಡ್ಕರ್ ಕುರಿತು ಸುಳ್ಳು, ಅವಮಾನಕರ ಹೇಳಿಕೆ; ಸ್ವಾಮಿ ಆನಂದ ಸ್ವರೂಪ್ ವಿರುದ್ಧ ಪ್ರಕರಣ ದಾಖಲು

Update: 2025-11-20 20:54 IST

 ಸ್ವಾಮಿ ಆನಂದ ಸ್ವರೂಪ್ | Photo Credit : Swami Anand Swaroop \ Facebook  

ಬಲಿಯಾ, ನ. 20: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಕುರಿತು ತಪ್ಪು ಮಾಹಿತಿ ಹಾಗೂ ವದಂತಿ ಹರಡಿದ ಆರೋಪದಲ್ಲಿ ಸ್ವಾಮಿ ಆನಂದ ಸ್ವರೂಪ್ ವಿರುದ್ಧ ಇಲ್ಲಿನ ಭೀಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಜಿಲ್ಲಾ ಪಂಚಾಯತ್ ಸದಸ್ಯರಾದ ಧನಪತಿ ದೇವಿ ಅವರ ಪ್ರತಿನಿಧಿಯೊಬ್ಬರು ಸಲ್ಲಿಸಿದ ದೂರಿನ ಆಧಾರದಲ್ಲಿ ಶಾಂಭವಿ ಪೀಠದ ಮುಖ್ಯಸ್ಥ ಹಾಗೂ ಕಾಳಿ ಸೇನಾದ ಸ್ಥಾಪಕ ಸ್ವಾಮಿ ಆನಂದ ಸ್ವರೂಪ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 353(2) ಹಾಗೂ ಐಟಿ ಕಾಯ್ದೆಯ ನಿಯಮಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಭೀಮಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಸೆಸರ ಗ್ರಾಮದ ನಿವಾಸಿಯಾಗಿರುವ ಸ್ವಾಮಿ ಆನಂದ ಸ್ವರೂಪ್ ಫೇಸ್‌ಬುಕ್‌ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತು ಅತ್ಯಂತ ಆಕ್ಷೇಪಾರ್ಹ, ದಾರಿತಪ್ಪಿಸುವ ಹಾಗೂ ಮಾನ ಹಾನಿಕರ ಹೇಳಿಕೆ ನೀಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ದೂರುದಾರ ಹೇಳಿದ್ದಾರೆ.

ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿ ಅಲ್ಲ ಎಂದು ಸ್ವಾಮಿ ಆನಂದ ಸ್ವರೂಪ್ ಅವರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಕೂಡ ಅವರು ಆರೋಪಿಸಿದ್ದಾರೆ.

ಇದು ಸಮಾಜದಲ್ಲಿ ಜಾತಿ ತಾರತಮ್ಯ, ದ್ವೇಷ ಹಾಗೂ ಹಿಂಸೆಯನ್ನು ಪ್ರಚೋದಿಸುವ ಹೇಯ ಉದ್ದೇಶವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದ್ದಾರೆ.

ಈ ಹೇಳಿಕೆಗಳು ಭಾರತೀಯ ಸಂವಿಧಾನದ ಘನತೆಗೆ ಅವಮಾನ ಉಂಟು ಮಾಡುತ್ತದೆ. ಸಮಾಜದಲ್ಲಿ ಪರಸ್ಪರ ಸಾಮರಸ್ಯ ಹಾಗೂ ಭಾತೃತ್ವಕ್ಕೆ ಅಡ್ಡಿ ಉಂಟು ಮಾಡುತ್ತದೆ. ಅಲ್ಲದೆ, ಕೋಮು ಉದ್ವಿಗ್ನತೆ ಹಾಗೂ ಜಾತಿ ದ್ವೇಷವನ್ನು ಸೃಷ್ಟಿಸುತ್ತದೆ ಎಂದು ದೂರುದಾರ ಹೇಳಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಹಾಗೂ ತನಿಖೆ ನಡೆಸುತ್ತಿದ್ದಾರೆ ಎಂದು ಸರ್ಕಲ್ ಅಧಿಕಾರಿ (ರಸರ) ಅಲೋಕ್ ಕುಮಾರ್ ಗುಪ್ತಾ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News