ತಮಿಳುನಾಡು | ಕಂಗನಾ ರಣಾವತ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ ಅಳಗಿರಿ
ಕೆ.ಎಸ್. ಅಳಗಿರಿ , ಕಂಗನಾ ರಣಾವತ್ | PC : NDTV
ಚೆನ್ನೈ, ಸೆ. 19: ನಟಿ ಹಾಗೂ ರಾಜಕಾರಣಿ ಕಂಗನಾ ರಣಾವತ್ ತಮಿಳುನಾಡಿಗೆ ಭೇಟಿ ನೀಡಿದರೆ, ಅವರ ಕೆನ್ನೆಗೆ ಬಾರಿಸಬೇಕು ಎಂದು ತಮಿಳುನಾಡು ಕಾಂಗ್ರೆಸ್‌ನ ಮಾಜಿ ವರಿಷ್ಠ ಕೆ.ಎಸ್. ಅಳಗಿರಿ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
‘‘ಕಂಗನಾ ರಣಾವತ್ ಅವರು 2020ರಲ್ಲಿ ನೀಡಿದ ಹೇಳಿಕೆಯನ್ನು ರೈತರು ನನಗೆ ತಿಳಿಸಿದರು. ಅನಂತರ ನಾನು ರಣಾವತ್ ಕೆನ್ನೆಗೆ ಬಾರಿಸುವಂತೆ ಕೆಲವು ರೈತರಲ್ಲಿ ಹೇಳಿದೆ’’ ಎಂದು ಅಳಗಿರಿ ತಿಳಿಸಿದ್ದಾರೆ.
‘‘ನಿನ್ನೆ 10ರಿಂದ 15 ರೈತರು ನನ್ನನ್ನು ಭೇಟಿಯಾದರು ಹಾಗೂ ರಣಾವತ್ ಒಮ್ಮೆ ಸುದ್ದಿಗಾರರಲ್ಲಿ ರೈತ ಮಹಿಳೆಯರ ಬಗ್ಗೆ, ಅವರು ಬಂಜರು ಭೂಮಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದರು ಎಂದು ನನಗೆ ಹೇಳಿದರು. ವರದಿಗಾರರೊಬ್ಬರು ಅವರನ್ನು ಮಹಿಳೆಯರು ಹೊಲದಲ್ಲಿ ಕೆಲಸ ಮಾಡುತ್ತಿದ್ದರೂ ಅವರು ತುಂಬಾ ಚುರುಕು ಹಾಗೂ ಧೈರ್ಯಶಾಲಿಗಳು. ಏನನ್ನು ಮಾಡಲು ಕೂಡ ಸಮರ್ಥರಾಗಿದ್ದಾರೆ ಅಲ್ಲವೇ ಎಂದು ಕೇಳಿದ್ದರು. ಅದಕ್ಕೆ ಕಂಗನಾ ರಣಾವತ್ ಕೂಡಲೇ, 100ರೂ. ಕೊಟ್ಟರೆ ಅವರು ಎಲ್ಲಿಗೆ ಕೂಡ ಬರಬಹುದು ಎಂದು ಪ್ರತಿಕ್ರಿಯಿಸಿದ್ದರು. ನನಗೆ ಆಘಾತವಾಗಿತ್ತು. ಈ ಮಹಿಳೆ, ಹಾಲಿ ಸಂಸದೆ ರೈತ ಮಹಿಳೆಯರನ್ನು ಯಾಕೆ ಟೀಕಿಸುತ್ತಿದ್ದಾರೆ? ಅವರು ಕೂಡ ಗ್ರಾಮೀಣ ಭಾರತದಿಂದ ಬಂದವರು’’ ಎಂದು ಅಳಗಿರಿ ಗುರುವಾರ ಹೇಳಿದ್ದಾರೆ.
ಅನಂತರ ತಾನು ಒಂದು ವೇಳೆ ರಣಾವತ್ ಅವರು ನಮ್ಮ ಪ್ರದೇಶಕ್ಕೆ ಆಗಮಿಸಿದರೆ, ಕಳೆದ ವರ್ಷ ಚಂಡಿಗಢ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಕಾನ್ಸ್‌ಟೇಬಲ್ ಓರ್ವರು ಅವರ ಕೆನ್ನೆಗೆ ಬಾರಿಸಿದಂತೆ ನೀವು ಕೂಡ ಬಾರಿಸಬೇಕು ಎಂದು ಕೃಷಿ ಕಾರ್ಮಿಕರಲ್ಲಿ ಹೇಳಿದೆ ಎಂದಿದ್ದಾರೆ.