2026ರ ತಮಿಳುನಾಡು ವಿಧಾನಸಭಾ ಚುನಾವಣೆ: ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟ ಸೇರಿದ ಪಿಎಂಕೆ
Photo Credit : thehindu.com
ಚೆನ್ನೈ: 2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುನ್ನ ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟವನ್ನು ಸೇರುವ ತನ್ನ ನಿರ್ಧಾರವನ್ನು ಪಟ್ಟಾಳಿ ಮಕ್ಕಳ್ ಕಚ್ಛಿ (ಪಿಎಂಕೆ) ಬುಧವಾರ ಪ್ರಕಟಿಸಿದೆ.
ಪಿಎಂಕೆ ಅಧ್ಯಕ್ಷ ಡಾ.ಅನ್ಬುಮಣಿ ರಾಮದಾಸ ಅವರು ಇಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಇ.ಕೆ.ಪಳನಿಸ್ವಾಮಿಯವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಮೈತ್ರಿ ವಿಧಾನಗಳ ಬಗ್ಗೆ ಚರ್ಚಿಸಿದ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಉಭಯ ನಾಯಕರು ಮೈತ್ರಿಯನ್ನು ಘೋಷಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಪಳನಿಸ್ವಾಮಿ,‘ಎಐಎಡಿಎಂಕೆ ಮತ್ತು ಪಿಎಂಕೆ ಪಕ್ಷಗಳ ನಾಯಕರು,ಕಾರ್ಯಕರ್ತರು ಮತ್ತು ಬೆಂಬಲಿಗರ ಆಶಯಗಳಿಗೆ ಅನುಗುಣವಾಗಿ ಈ ಮೈತ್ರಿಯನ್ನು ಮಾಡಿಕೊಳ್ಳಲಾಗಿದೆ. ಇದು ಗೆಲುವಿನ ಮೈತ್ರಿಕೂಟವಾಗಿದೆ. ಜನವಿರೋಧಿ ಡಿಎಂಕೆ ಸರಕಾರವನ್ನು ಕಿತ್ತೊಗೆದು ತಮಿಳುನಾಡಿನ ಜನರಿಗೆ ಕಲ್ಯಾಣ-ಆಧಾರಿತ ಆಡಳಿತವನ್ನು ನೀಡುವ ಬಲಿಷ್ಠ ಸರಕಾರವನ್ನು ರಚಿಸುವುದು ನಮ್ಮ ಸಾಮೂಹಿಕ ಗುರಿಯಾಗಿದೆ’ ಎಂದು ಹೇಳಿದರು.
ಎಐಎಡಿಎಂಕೆ ನೇತೃತ್ವದ ಮೈತ್ರಿಕೂಟವು 234 ವಿಧಾನಸಭಾ ಕ್ಷೇತ್ರಗಳ ಪೈಕಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತದೆ ಮತ್ತು ಸ್ಪಷ್ಟ ಜನಾದೇಶದೊಂದಿಗೆ ಅಧಿಕಾರಕ್ಕೆ ಮರಳುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ ಪಳನಿಸ್ವಾಮಿ,ಸ್ಥಾನ ಹಂಚಿಕೆ ಚರ್ಚೆಗಳು ಅಂತಿಮಗೊಂಡಿದ್ದು,ವಿವರಗಳನ್ನು ನಂತರ ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಮೈತ್ರಿಯು ಪಿಎಂಕೆ ಕಾರ್ಯಕರ್ತರಿಗೆ ಸಂತಸದ ಮತ್ತು ಬಹುನಿರೀಕ್ಷಿತ ಘಳಿಗೆಯಾಗಿದೆ ಎಂದು ಬಣ್ಣಿಸಿದ ರಾಮದಾಸ,ತನ್ನ ಪಕ್ಷವು ಜನವಿರೋಧಿ,ಭ್ರಷ್ಟ,ಮಹಿಳಾ ಮತ್ತು ಸಾಮಾಜಿಕ ನ್ಯಾಯ ವಿರೋಧಿ ಡಿಎಂಕೆ ಆಡಳಿತವನ್ನು ಕಿತ್ತೊಗೆಯಲು ಎಐಎಡಿಎಂಕೆ ಜೊತೆ ಕೈಜೋಡಿಸಿದೆ ಎಂದು ಹೇಳಿದರು.
ಗಮನಾರ್ಹ ಮತಗಳ ಪಾಲಿನೊಂದಿಗೆ ಸುಮಾರು 100 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಭಾವವನ್ನು ಹೊಂದಿರುವ ಪಿಎಂಕೆ ರಾಜ್ಯದಲ್ಲಿ ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟವನ್ನು ಸೇರಿದ ಮೊದಲ ಪಕ್ಷವಾಗಿದೆ.