ತಮಿಳುನಾಡು ವಿಧಾನಸಭಾ ಚುನಾವಣೆ| ಪ್ರತಿ ಕುಟುಂಬಗಳಿಗೆ ತಲಾ 2,000 ರೂ.ನೆರವು ಸೇರಿದಂತೆ 5 ಭರವಸೆಗಳನ್ನು ನೀಡಿದ AIADMK
Photo Credit : PTI
ಚೆನ್ನೈ: ಶನಿವಾರ ಎಲ್ಲರಿಗಿಂತ ಮುಂಚಿತವಾಗಿ ಚುನಾವಣಾ ಭರವಸೆಗಳನ್ನು ಪ್ರಕಟಿಸಿರುವ ತಮಿಳುನಾಡಿನ ಪ್ರಮುಖ ವಿರೋಧ ಪಕ್ಷ ಎಐಎಡಿಎಂಕೆ, ಪಡಿತರ ಚೀಟಿ ಹೊಂದಿರುವ ಎಲ್ಲ ಕುಟುಂಬಗಳಿಗೆ ಮಾಸಿಕ ತಲಾ 2,000 ರೂ. ನೆರವು, ನಗರ ಬಸ್‌ಗಳಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ, ಹಾಗೂ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸದ ಅವಧಿಯನ್ನು 125 ದಿನಗಳಿಂದ 150 ದಿನಗಳಿಗೆ ಹೆಚ್ಚಿಸುವುದಾಗಿ ಸೇರಿದಂತೆ ಐದು ಭರವಸೆಗಳನ್ನು ನೀಡಿದೆ.
ಈ ಐದು ಚುನಾವಣಾ ಭರವಸೆಗಳನ್ನು ಪ್ರಕಟಿಸಲು ಎಐಎಡಿಎಂಕೆ ಸಂಸ್ಥಾಪಕ ಎಂ.ಜಿ. ರಾಮಚಂದ್ರನ್ ಅವರ ಜನ್ಮದಿನವನ್ನು ಆಯ್ದುಕೊಂಡಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ, ಪಕ್ಷದ ಪ್ರಣಾಳಿಕೆ ಮಹಿಳೆಯರನ್ನು ಮೊದಲ ಸ್ಥಾನದಲ್ಲಿರಿಸುವುದರೊಂದಿಗೆ ಕಲ್ಯಾಣ, ಘನತೆ ಮತ್ತು ಆರ್ಥಿಕ ನ್ಯಾಯದ ಮೇಲಿನ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.
“ಈ ಭರವಸೆಗಳು ಜನರನ್ನು ಮೊದಲ ಸ್ಥಾನದಲ್ಲಿಡುವ ಎಐಎಡಿಎಂಕೆಯ ಆಡಳಿತ ಪರಂಪರೆಯನ್ನು ಪ್ರತಿಫಲಿಸುತ್ತವೆ. ನಮ್ಮ ಗುರಿ ಮಹಿಳೆಯರನ್ನು ಸಬಲೀಕರಣಗೊಳಿಸುವುದು, ಜೀವನೋಪಾಯವನ್ನು ಬಲಪಡಿಸುವುದು, ಎಲ್ಲರಿಗೂ ವಸತಿಯನ್ನು ಖಾತರಿಗೊಳಿಸುವುದು ಹಾಗೂ ಕಾರ್ಮಿಕರ ಘನತೆಯನ್ನು ಮರುಸ್ಥಾಪಿಸುವುದಾಗಿದೆ” ಎಂದು ಅವರು ತಿಳಿಸಿದ್ದಾರೆ.
‘ಕುಳವಿಕ್ಕು’ ಎಂದು ಹೆಸರಿಸಲಾದ ಯೋಜನೆಯಡಿ ಪ್ರತಿ ಕುಟುಂಬದ ಮಹಿಳಾ ಮುಖ್ಯಸ್ಥೆಯ ಖಾತೆಗೆ ಮಾಸಿಕ ತಲಾ 2,000 ರೂ. ನೆರವನ್ನು ನೇರವಾಗಿ ಜಮಾ ಮಾಡಲಾಗುತ್ತದೆ. ಡಿಎಂಕೆ ಸರಕಾರ ಜಾರಿಗೆ ತಂದಿರುವ ‘ಕಲೈಗ್ನರ್ ಮಗಳಿರ್ ಉರಿಮೈ ತಿಟ್ಟಂ’ ಯೋಜನೆಯಡಿ ರಾಜ್ಯದಲ್ಲಿ ಸುಮಾರು 1.31 ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳು ತಲಾ 1,000 ರೂ. ಆರ್ಥಿಕ ನೆರವು ನೀಡಲಾಗುತ್ತಿದೆ. ಈ ಮೊತ್ತವನ್ನು ಎಐಎಡಿಎಂಕೆ ತನ್ನ ಚುನಾವಣಾ ಭರವಸೆಯಲ್ಲಿ ಎಲ್ಲಾ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ 2,000 ರೂ.ಗೆ ಏರಿಸುವುದಾಗಿ ಘೋಷಿಸಿದೆ.