ಟ್ಯಾಕ್ಸ್ ಕ್ಲಿಯರನ್ಸ್ ಸರ್ಟಿಫಿಕೇಟ್ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಮಾತ್ರ: ವ್ಯಾಪಕ ಆಕ್ರೋಶದ ಬಳಿಕ ಸರಕಾರದ ಸ್ಪಷ್ಟನೆ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ವಿದೇಶಗಳಿಗೆ ತೆರಳಲು ಟ್ಯಾಕ್ಸ್ ಕ್ಲಿಯರನ್ಸ್ ಸರ್ಟಿಫಿಕೇಟ್ (ಟಿಸಿಸಿ) ಅಥವಾ ತೆರಿಗೆ ಸಂದಾಯ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಿರುವ ಬಜೆಟ್ ಪ್ರಸ್ತಾವದ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶದ ಬಳಿಕ ಸರಕಾರವು ರವಿವಾರ,ಪ್ರಸ್ತಾವಿತ ತಿದ್ದುಪಡಿಯು ಎಲ್ಲರಿಗಾಗಿ ಅಲ್ಲ,ಹಣಕಾಸು ಅಕ್ರಮಗಳ ಆರೋಪಿಗಳು ಅಥವಾ ಗಣನೀಯ ತೆರಿಗೆಯನ್ನು ಬಾಕಿ ಉಳಿಸಿಕೊಂಡಿರುವವರಿಗೆ ಮಾತ್ರ ಇದು ಅನ್ವಯಿಸುತ್ತದೆ ಎಂದು ಸ್ಪಷ್ಟಪಡಿಸಿದೆ.
ವಿತ್ತ ಸಚಿವಾಲಯವು ಹಣಕಾಸು ಮಸೂದೆ,2024ರಲ್ಲಿ ಕಪ್ಪುಹಣ ಕಾಯ್ದೆ,2015ರ ಉಲ್ಲೇಖವನ್ನು ಕಾಯ್ದೆಗಳ ಪಟ್ಟಿಗೆ ಸೇರಿಸಲು ಪ್ರಸ್ತಾವಿಸಿದೆ. ಇದರಡಿ ಯಾವುದೇ ವ್ಯಕ್ತಿಯು ಟಿಸಿಸಿಯನ್ನು ಪಡೆಯಲು ತನ್ನ ಬಾಕಿಯಿರುವ ತೆರಿಗೆಗಳನ್ನು ಪಾವತಿಸಬೇಕಾಗುತ್ತದೆ.
ಪ್ರಸ್ತಾವಿತ ತಿದ್ದುಪಡಿಯು ಎಲ್ಲ ನಿವಾಸಿಗಳೂ ಟಿಸಿಸಿ ಪಡೆಯುವುದನ್ನು ಅಗತ್ಯವಾಗಿಸಿಲ್ಲ ಎಂದು ವಿತ್ತ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.
ಆದಾಯ ತೆರಿಗೆ ಕಾಯ್ದೆ,1961ರ ಕಲಂ 230ರಡಿ,ಪ್ರತಿಯೊಬ್ಬ ವ್ಯಕ್ತಿಯೂ ಟಿಸಿಸಿಯನ್ನು ಪಡೆದುಕೊಳ್ಳಬೇಕಿಲ್ಲ. ನಿರ್ದಿಷ್ಟ ವ್ಯಕ್ತಿಗಳ ಪ್ರಕರಣಗಳಲ್ಲಿ ಮಾತ್ರ ಟಿಸಿಸಿ ಪಡೆಯುವುದನ್ನು ಅಗತ್ಯವಾಗಿಸಿರುವ ಸಂದರ್ಭಗಳಿದ್ದರೆ ಅದನ್ನು ಪಡೆದುಕೊಳ್ಳಬೇಕಾಗುತ್ತದೆ.
ಭಾರತದಲ್ಲಿ ನೆಲೆಸಿರುವ ವ್ಯಕ್ತಿಗಳು ಕೆಲವು ಸಂದರ್ಭಗಳಲ್ಲಿ ಮಾತ್ರ ಟಿಸಿಸಿಯನ್ನು ಪಡೆದುಕೊಳ್ಳುವುದು ಅಗತ್ಯವಾಗಬಹುದು ಎಂದು ಆದಾಯ ತೆರಿಗೆ ಇಲಾಖೆಯು 2004ರ ಅಧಿಸೂಚನೆಯ ಮೂಲಕ ಸ್ಪಷ್ಟಪಡಿಸಿದೆ ಎಂದು ಸಚಿವಾಲಯವು ತಿಳಿಸಿದೆ.
ವ್ಯಕ್ತಿಯು ಗಂಭೀರ ಹಣಕಾಸು ಅಕ್ರಮಗಳಲ್ಲಿ ಭಾಗಿಯಾಗಿದ್ದರೆ ಹಾಗೂ ಆದಾಯ ತೆರಿಗೆ ಕಾಯ್ದೆ ಅಥವಾ ಸಂಪತ್ತು ತೆರಿಗೆ ಕಾಯ್ದೆಯಡಿ ಪ್ರಕರಣಗಳ ತನಿಖೆಯಲ್ಲಿ ಆತನ ಉಪಸ್ಥಿತಿ ಅಗತ್ಯವಾಗಿದ್ದರೆ ಮತ್ತು ಆತನ ವಿರುದ್ಧ ತೆರಿಗೆ ಬೇಡಿಕೆ ನೋಟಿಸ್ ಹೊರಡಿಸುವ ಸಾಧ್ಯತೆಯಿದ್ದರೆ ಅಥವಾ ವ್ಯಕ್ತಿಯು 10 ಲಕ್ಷ ರೂ.ಗೂ ಅಧಿಕ ನೇರ ತೆರಿಗೆ ಬಾಕಿಯನ್ನುಳಿಸಿಕೊಂಡಿದ್ದರೆ: ಇವು ಇಂತಹ ಸಂದರ್ಭಗಳಲ್ಲಿ ಸೇರಿವೆ.
ಟಿಸಿಸಿಗೆ ಕಾರಣಗಳನ್ನು ದಾಖಲಿಸಿದ ಬಳಿಕ ಮತ್ತು ಆದಾಯ ತೆರಿಗೆ ಪ್ರಧಾನ ಮುಖ್ಯ ಆಯುಕ್ತರು ಅಥವಾ ಆದಾಯ ತೆರಿಗೆ ಮುಖ್ಯ ಆಯುಕ್ತರ ಅನುಮೋದನೆಯನ್ನು ಪಡೆದುಕೊಂಡ ಬಳಿಕ ತೆರಿಗೆ ಸಂದಾಯ ಪ್ರಮಾಣಪತ್ರವನ್ನು ಪಡೆಯುವಂತೆ ವ್ಯಕ್ತಿಗೆ ಸೂಚಿಸಬಹುದು ಎಂದು ಆದಾಯ ತೆರಿಗೆ ಇಲಾಖೆಯು ತಿಳಿಸಿದೆ.
ವ್ಯಕ್ತಿಯು ಆದಾಯ ತೆರಿಗೆ ಕಾಯ್ದೆ ಅಥವಾ ಸಂಪತ್ತು ತೆರಿಗೆ ಕಾಯ್ದೆ 1957 ಅಥವಾ ಉಡುಗೊರೆ ತೆರಿಗೆ ಕಾಯ್ದೆ 1958 ಅಥವಾ ವೆಚ್ಚ ತೆರಿಗೆ ಕಾಯ್ದೆ 1987ರಡಿ ಯಾವುದೇ ಹೊಣೆಗಾರಿಕೆಗಳನ್ನು ಹೊಂದಿಲ್ಲ ಎಂದು ಉಲ್ಲೇಖಿಸಿ ಆದಾಯ ತೆರಿಗೆ ಪ್ರಾಧಿಕಾರವು ಟಿಸಿಸಿಯನ್ನು ನೀಡಬೇಕಾಗುತ್ತದೆ.