×
Ad

ವಿಮಾನದಲ್ಲಿ ತಾಂತ್ರಿಕ ದೋಷ : ಎರಡು ದಿನಗಳಿಂದ ಮಂಗೋಲಿಯಾದಲ್ಲಿ ಅತಂತ್ರರಾಗಿರುವ ಏರ್‌ಇಂಡಿಯಾ ಪ್ರಯಾಣಿಕರಿಗಾಗಿ ಬದಲಿ ವಿಮಾನ ರವಾನೆ

Update: 2025-11-04 19:35 IST

Photo: NDtv

ಹೊಸದಿಲ್ಲಿ,ನ.4: ಸ್ಯಾನ್‌ಫ್ರಾನ್ಸಿಸ್ಕೋದಿಂದ ಕೋಲ್ಕತಾ ಮೂಲಕ ದಿಲ್ಲಿಗೆ ಆಗಮಿಸುತ್ತಿದ್ದ ತನ್ನ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಬಳಿಕ ಎರಡು ದಿನಗಳಿಂದ ಮಂಗೋಲಿಯಾದಲ್ಲಿ ಸಿಕ್ಕಿಹಾಕಿಕೊಂಡಿರುವ ಪ್ರಯಾಣಿಕರನ್ನು ಭಾರತಕ್ಕೆ ಕರೆತರಲು ಏರ್ ಇಂಡಿಯಾ ಮಂಗಳವಾರ ಬದಲಿ ವಿಮಾನವನ್ನು ರವಾನಿಸಿದೆ. ಪ್ರಯಾಣಿಕರು ಬುಧವಾರ ಬೆಳಿಗ್ಗೆ ದಿಲ್ಲಿಗೆ ಬಂದಿಳಿಯುವ ನಿರೀಕ್ಷೆಯಿದೆ.

ನ.2ರಂದು ದಿಲ್ಲಿಗೆ ಬರುತ್ತಿದ್ದಾಗ ಮಧ್ಯ ಆಗಸದಲ್ಲಿ ಸಿಬ್ಬಂದಿಗಳು ಶಂಕಿತ ತಾಂತ್ರಿಕ ದೋಷವನ್ನು ವರದಿ ಮಾಡಿದ ಬಳಿಕ ವಿಮಾನವನ್ನು ಮಂಗೋಲಿಯಾದ ಉಲಾನ್‌ಬಾತರ್‌ಗೆ ತಿರುಗಿಸಲಾಗಿದ್ದು, ಅಲ್ಲಿ ಅದು ಸುರಕ್ಷಿತವಾಗಿ ಇಳಿದಿತ್ತು.

ರವಿವಾರ ಅಪರಾಹ್ನ 2:47ಕ್ಕೆ(ಭಾರತೀಯ ಕಾಲಮಾನ) ಸ್ಯಾನ್‌ಫ್ರಾನ್ಸಿಸ್ಕೋದಿಂದ ನಿರ್ಗಮಿಸಿದ್ದ ವಿಮಾನವು ಸೋಮವಾರ ರಾತ್ರಿ 9:59ಕ್ಕೆ ದಿಲ್ಲಿಯಲ್ಲಿ ಇಳಿಯಬೇಕಿತ್ತು. ತಾಂತ್ರಿಕ ದೋಷದಿಂದಾಗಿ ವಿಮಾನವು ಉಲಾನ್‌ಬಾತರ್‌ನಲ್ಲಿ ಇಳಿದ ಬಳಿಕ ಸ್ಥಳೀಯ ಅಧಿಕಾರಿಗಳು ಮತ್ತು ಮಂಗೋಲಿಯಾದಲ್ಲಿಯ ಭಾರತೀಯ ರಾಯಭಾರ ಕಚೇರಿಯ ನೆರವಿನೊಂದಿಗೆ ಪ್ರಯಾಣಿಕರಿಗೆ ಆಹಾರ ಮತ್ತು ವಸತಿ ಸೌಲಭ್ಯಗಳನ್ನು ಒದಗಿಸಲಾಗಿತ್ತು.

ಉಲಾನ್‌ಬಾತರ್‌ನಲ್ಲಿ ವಿಮಾನದ ಅಗತ್ಯ ತಪಾಸಣೆಗಳನ್ನು ನಡೆಸಲಾಗುತ್ತಿದೆ ಎಂದು ಏರ್‌ಇಂಡಿಯಾ ವಕ್ತಾರರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News