ತೆಲಂಗಾಣ | ಕಾನ್‌ಸ್ಟೆಬಲ್ ಹತ್ಯೆ ಪ್ರಕರಣ : ಬಂದೂಕು ಕಸಿದು ಪರಾರಿಯಾಗಲು ಯತ್ನಿಸಿದ ಆರೋಪಿ ಪೊಲೀಸರ ಗುಂಡಿಗೆ ಬಲಿ
PC : indiatoday.in
ಹೈದರಾಬಾದ್, ಅ. 20: ತೆಲಂಗಾಣದ ನಿಝಾಮಾಬಾದ್ ಜಿಲ್ಲೆಯಲ್ಲಿ ಪೊಲೀಸ್ ಕಾನ್ಸ್‌ಟೆಬಲ್ ಓರ್ವರನ್ನು ಹತ್ಯೆಗೈದ ಪ್ರಕರಣದ ಆರೋಪಿ ಶೇಖ್ ರಿಯಾಝ್ (24) ಸೋಮವಾರ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ.
ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಿಯಾಝ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಸಂದರ್ಭ ಪೊಲೀಸರು ಎನ್‌ಕೌಂಟರ್ ನಡೆಸಿದ್ದಾರೆ.
ರಿಯಾಝ್ ಭದ್ರತಾ ಸಿಬ್ಬಂದಿಯಿಂದ ಬಂದೂಕು ಕಸಿದುಕೊಂಡು ಆಸ್ಪತ್ರೆಯ ಆವರಣದ ಒಳಗೆ ಗುಂಡು ಹಾರಿಸಿದ್ದಾನೆ. ಇದರಿಂದ ಕಾನ್ಸ್‌ಟೆಬಲ್ ಓರ್ವರು ಗಾಯಗೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಕರ್ತವ್ಯದಲ್ಲಿದ್ದ ಇನ್ನೊಬ್ಬ ಅಧಿಕಾರಿ ರಿಯಾಝ್ ಮೇಲೆ ಗುಂಡು ಹಾರಿಸಿದ್ದಾರೆ. ಇದರಿಂದ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಾನ್ಸ್‌ಟೆಬಲ್ ಪ್ರಮೋದ್ ಅವರನ್ನು ಹತ್ಯೆಗೈದ ಬಳಿಕ ರಿಯಾಝ್ ಪರಾರಿಯಾಗಿದ್ದ. ರವಿವಾರ ಆಸಿಫ್ ಎಂದು ಗುರುತಿಸಲಾದ ವ್ಯಕ್ತಿಯೊಂದಿಗೆ ನಡೆದ ವಾಗ್ವಾದದ ನಂತರ ರಿಯಾಝ್‌ನನ್ನು ಬಂಧಿಸಲಾಯಿತು. ಸಾರ್ವಜನಿಕವಾಗಿ ನಡೆದ ಈ ಜಗಳ ಆರಂಭದಲ್ಲಿ ನಾಗರಿಕರ ವಿವಾದದಂತೆ ಕಂಡು ಬಂತು. ಆದರೆ, ಈ ಜಗಳದಲ್ಲಿ ಭಾಗಿಯಾದವರಲ್ಲಿ ಓರ್ವ ಕೊಲೆ ಆರೋಪಿ ಎಂದು ಶಂಕಿಸಲಾದ ರಿಯಾಝ್ ಎಂದು ಪೊಲೀಸರು ಪತ್ತೆ ಹಚ್ಚಿದರು. ಈ ಜಗಳದ ಸಂದರ್ಭ ಆತ ಆಸಿಫ್ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಅನಂತರ ಪೊಲೀಸರು ರಿಯಾಝ್‌ನನ್ನು ಬಂಧಿಸಿದ್ದರು.
ಸೋಮವಾರ ಬೆಳಗ್ಗೆ ರಿಯಾಝ್ ಆತನ ಭದ್ರತೆಗೆ ನಿಯೋಜಿಸಲಾಗಿದ್ದ ಪೊಲೀಸ್ ಕಾನ್ಸ್‌ಟೆಬಲ್‌ನಿಂದ ಬಂದೂಕು ಕಸಿದುಕೊಂಡು ಅಲ್ಲಿದ್ದ ಪೊಲೀಸ್ ಅಧಿಕಾರಿಗಳ ಮೇಲೆ ಗುಂಡು ಹಾರಿಸಿದ್ದಾನೆ. ಇದರಿಂದ ಓರ್ವ ಕಾನ್ಸ್‌ಟೆಬಲ್ ಗಾಯಗೊಂಡಿದ್ದಾರೆ. ಈ ಸಂದರ್ಭ ಇನ್ನೋರ್ವ ಪೊಲೀಸ್ ಅಧಿಕಾರಿ ಪ್ರತಿ ದಾಳಿ ನಡೆಸಿದ್ದಾರೆ. ಈ ಪ್ರತಿದಾಳಿಯಲ್ಲಿ ರಿಯಾಝ್ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.