×
Ad

ತೆಲಂಗಾಣ | ರಂಗಾರೆಡ್ಡಿಯಲ್ಲಿ ಬಸ್– ಲಾರಿ ಮುಖಾಮುಖಿ ಢಿಕ್ಕಿ : ಕನಿಷ್ಠ 24 ಮಂದಿ ಮೃತ್ಯು, ಹಲವರ ಸ್ಥಿತಿ ಗಂಭೀರ

Update: 2025-11-03 11:08 IST

Photo | (X/ @tirishreddy)

ಹೈದರಾಬಾದ್‌, ನ.3: ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 24 ಮಂದಿ ಮೃತಪಟ್ಟಿದ್ದಾರೆ.

ಚೆವೆಲ್ಲಾ ಮಂಡಲದ ಮಿರ್ಜಾಗುಡ ಗ್ರಾಮದ ಬಳಿ ಜಲ್ಲಿಕಲ್ಲು ಸಾಗಿಸುತ್ತಿದ್ದ ಲಾರಿ ಹಾಗೂ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಮುಖಾಮುಖಿಯಾಗಿ ಢಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ತಂದೂರ್ ಡಿಪೋಗೆ ಸೇರಿದ ಬಸ್ 70 ಪ್ರಯಾಣಿಕರೊಂದಿಗೆ ಹೈದರಾಬಾದ್‌ಗೆ ಹೊರಟಿತ್ತು. ಎದುರು ದಿಕ್ಕಿನಿಂದ ವೇಗವಾಗಿ ಬಂದ ಲಾರಿ ಬಸ್‌ಗೆ ಢಿಕ್ಕಿ ಹೊಡೆದು ಬಸ್ ಮೇಲೆಯೇ ಮಗುಚಿ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಢಿಕ್ಕಿಯ ತೀವ್ರತೆಗೆ ಲಾರಿಯ ಜಲ್ಲಿಕಲ್ಲುಗಳು ಬಸ್ ಒಳಗೆ ಸುರಿದು ಅನೇಕರು ಬಸ್‌ನ ಅವಶೇಷಗಳಡಿ ಸಿಲುಕಿಕೊಂಡಿದ್ದರು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಪ್ರಯಾಣಿಕರು ಸಹಾಯಕ್ಕಾಗಿ ಕೂಗಾಡುತ್ತಿದ್ದರು. ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಧಾವಿಸಿದ ತುರ್ತು ಸೇವಾ ಸಿಬ್ಬಂದಿ ಮೂರು ಜೆಸಿಬಿ ಯಂತ್ರಗಳ ಸಹಾಯದಿಂದ ಅವಶೇಷಗಳ ತೆರವು ಕಾರ್ಯ ಕೈಗೊಂಡಿದ್ದಾರೆ. ಗಾಯಾಳುಗಳನ್ನು ಚೆವೆಲ್ಲಾ ಸರಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡವರನ್ನು ಹೈದರಾಬಾದ್‌ನ ವಿವಿಧ ಆಸ್ಪತ್ರೆಗೆ ಕಳುಹಿಸಲಾಗಿದೆ. ಮೃತರ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಸ್‌ನಲ್ಲಿದ್ದ ಪ್ರಯಾಣಿಕರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು ಮತ್ತು ನೌಕರರು. ವಾರಾಂತ್ಯದ ರಜೆಯ ಬಳಿಕ ಹೈದರಾಬಾದ್‌ಗೆ ಹಿಂತಿರುಗುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News