ತೆಲಂಗಾಣ: ಅತ್ಯಾಚಾರಕ್ಕೊಳಗಾದ ಬುಡಕಟ್ಟು ಮಹಿಳೆಯ ಮೃತ್ಯು
Credit: PTI File Photo
ಹೈದರಾಬಾದ್,ಅ.12: ತೆಲಂಗಾಣದ ಮೇಡಕ್ ಜಿಲ್ಲೆಯಲ್ಲಿ ಅತ್ಯಾಚಾರಕ್ಕೊಳಗಾಗಿ ತಲೆಗೆ ತೀವ್ರವಾಗಿ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದ 33ರ ಹರೆಯದ ಬುಡಕಟ್ಟು ಮಹಿಳೆಯೋರ್ವಳು ಮೃತಪಟ್ಟಿದ್ದಾಳೆ ಎಂದು ಪೋಲಿಸರು ರವಿವಾರ ತಿಳಿಸಿದ್ದಾರೆ.
ದಿನಗೂಲಿ ಕಾರ್ಮಿಕಳಾಗಿ ದುಡಿಯುತ್ತಿದ್ದ ಮಹಿಳೆ ಐವರು ಮಕ್ಕಳ ತಾಯಿಯಾಗಿದ್ದು, ಶುಕ್ರವಾರ ಕೂಲಿ ಕೆಲಸಕ್ಕೆಂದು ಮನೆಯಿಂದ ಹೊರಬಿದ್ದಿದ್ದರು. ಶನಿವಾರ ಬೆಳಿಗ್ಗೆ ಕುಲ್ಚಾರಮ್ ಮಂಡಲ ವ್ಯಾಪ್ತಿಯಲ್ಲಿ ಮರವೊಂದರ ಕೆಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಆಕೆಯನ್ನು ಗಮನಿಸಿದ್ದ ಕೆಲವು ಸ್ಥಳೀಯರು ಪೋಲಿಸರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಧಾವಿಸಿದ ಪೋಲಿಸರು ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿ ಬಳಿಕ ಹೈದರಾಬಾದಿನ ಇನ್ನೊಂದು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಶನಿವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ ಎಂದು ಪೋಲಿಸ್ ಅಧಿಕಾರಿಯೋರ್ವರು ತಿಳಿಸಿದರು.
ಮಹಿಳೆಯ ಪತಿಯ ದೂರಿನ ಮೇರೆಗೆ ಆರಂಭದಲ್ಲಿ ಅತ್ಯಾಚಾರ ಮತ್ತು ಕೊಲೆಯತ್ನ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಪೋಲಿಸರು ಆಕೆಯ ಸಾವಿನ ಬಳಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನಾಗಿ ಪರಿವರ್ತಿಸಿದ್ದಾರೆ.