ತೆಲಂಗಾಣ ಸುರಂಗ ಕುಸಿತ | ಪರಿಸ್ಥಿತಿಯ ಮೌಲ್ಯಮಾಪನಕ್ಕಾಗಿ GSI, NGRI ತಜ್ಞರ ಬಳಕೆ
Photo : Reuters
ನಾಗರಕರ್ನೂಲ್: ಶನಿವಾರ ಶ್ರೀಶೈಲಂ ಎಡ ದಂಡೆ ಕಾಲುವೆ ಸುರಂಗದ ಒಂದು ಪಾರ್ಶ್ವ ಕುಸಿದು ಬಿದ್ದ ನಂತರ, ಅದರೊಳಗೆ ಸಿಲುಕಿಕೊಂಡಿರುವ ಎಂಟು ಕಾರ್ಮಿಕರ ರಕ್ಷಣೆಗೆ ಸಲಹೆ ಪಡೆಯಲು ತೆಲಂಗಾಣ ಸರಕಾರ GSI ಹಾಗೂ NGRI ತಜ್ಞರ ಮೊರೆ ಹೋಗಿದೆ.
ಎಂಟು ಮಂದಿ ಕಾರ್ಮಿಕರು ನಾಲ್ಕನೆಯ ದಿನವೂ ಸುರಂಗದೊಳಗೆ ಸಿಲುಕಿಕೊಂಡಿರುವುದರಿಂದ, ರಕ್ಷಣಾ ಕಾರ್ಯಾಚರಣೆಯಲ್ಲಿ ಭಾರತೀಯ ಭೌಗೋಳಿಕ ಸಮೀಕ್ಷಾ ಸಂಸ್ಥೆ (GSI) ಹಾಗೂ ರಾಷ್ಟ್ರೀಯ ಭೌಗೋಳಿಕ ಸಂಶೋಧನಾ ಸಂಸ್ಥೆ(NGRI) ಯ ತಜ್ಞರನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂದು ಮಂಗಳವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಕುರಿತು ಮಂಗಳವಾರ ಪ್ರತಿಕ್ರಿಯಿಸಿದ ನಾಗರಕರ್ನೂಲ್ ಜಿಲ್ಲಾಧಿಕಾರಿ ಬಿ.ಸಂತೋಷ್, ಮುಂದೆ ಯಾವುದೇ ಕ್ರಮ ತೆಗೆದುಕೊಳ್ಳುವುದಕ್ಕೂ ಮುನ್ನ, ನೀರು ಹೊರಹಾಕುವ ಕಾರ್ಯ ಪ್ರಗತಿಯಲ್ಲಿದ್ದರೂ, ಸುರಂಗದ ಸ್ಥಿರತೆಯನ್ನು ಪರಿಗಣನೆಗೆ ತೆಗೆದುಕೊಳ್ಳುಲಾಗುವುದು ಎಂದು ಹೇಳಿದ್ದಾರೆ.
ಭಾರತೀಯ ಭೌಗೋಳಿಕ ಸಮೀಕ್ಷಾ ಸಂಸ್ಥೆ ಹಾಗೂ ರಾಷ್ಟ್ರೀಯ ಭೌಗೋಳಿಕ ಸಂಶೋಧನಾ ಸಂಸ್ಥೆಯಲ್ಲದೆ, ಸುರಂಗ ಸಂಬಂಧಿತ ಕಾರ್ಯಾಚರಣೆಯಲ್ಲಿ ವ್ಯಾಪಕ ಅನುಭವವಿರುವ, ಎಲ್ ಆ್ಯಂಡ್ ಟಿಯೊಂದಿಗೆ ಸಹಯೋಗ ಹೊಂದಿರುವ ಆಸ್ಟ್ರೇಲಿಯ ತಜ್ಞರೊಬ್ಬರನ್ನೂ ಅಪಘಾತ ಸಂಭವಿಸಿದ ಸ್ಥಳದಲ್ಲಿನ ಸುರಂಗದ ಸ್ಥಿರತೆಯ ಮೌಲ್ಯಮಾಪನ ನಡೆಸಲು ಬಳಸಿಕೊಳ್ಳಲಾಗುತ್ತಿದೆ.