ಥಾಣೆ ಸ್ಥಳೀಯ ಸಂಸ್ಥೆ ಚುನಾವಣೆ | ಇಬ್ಬರು ಅಭ್ಯರ್ಥಿಗಳ ಬೆಂಬಲಿಗರ ನಡುವೆ ಘರ್ಷಣೆ
Photo credit: PTI
ಥಾಣೆ: ಗುರುವಾರ ನಡೆದ ಠಾಣೆ ಸ್ಥಳೀಯ ಸಂಸ್ಥೆ ಚುನಾವಣೆಯ ವೇಳೆ ಇಬ್ಬರು ಅಭ್ಯರ್ಥಿಗಳ ಬೆಂಬಲಿಗರ ನಡುವೆ ಘರ್ಷಣೆ ನಡೆದಿದ್ದು, ಮಧ್ಯಪ್ರವೇಶಿಸಿದ ಪೊಲೀಸರು ಘರ್ಷಣೆಯನ್ನು ಶಮನಗೊಳಿಸಿದ್ದಾರೆ ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ.
ಗುರುವಾರ ಸಂಜೆ ಮನ್ಪದ ಪ್ರದೇಶದ ವಾರ್ಡ್ ನಂ. 3ರಲ್ಲಿ ಶಿವಸೇನೆಯ ಅಭ್ಯರ್ಥಿ ಹಾಗೂ ಮಾಜಿ ಮೇಯರ್ ಮೀನಾಕ್ಷಿ ಶಿಂದೆ ಹಾಗೂ ಶಿವಸೇನೆಯ ಬಂಡಾಯ ಅಭ್ಯರ್ಥಿ ಭೂಷಣ್ ಭೋಯಿರ್ ಬೆಂಬಲಿಗರ ನಡುವೆ ಘರ್ಷಣೆ ನಡೆದಿದ್ದರಿಂದ, ಸ್ಥಳದಲ್ಲಿ ಹೈಡ್ರಾಮಾ ಪರಿಸ್ಥಿತಿ ನಿರ್ಮಾಣವಾಗಿತ್ತು.
ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಲು ಭೋಯಿರ್ ಸಶಸ್ತ್ರ ಜನರನ್ನು ಗುಂಪುಗೂಡಿಸಿದ್ದರು ಎಂದು ಮೀನಾಕ್ಷಿ ಶಿಂದೆ ಆರೋಪಿಸಿದ್ದಾರೆ. ಆದರೆ, ನಮ್ಮ ಅಭ್ಯರ್ಥಿಯ ಕಣ್ಣಿಗೆ ಶಿಂದೆ ಗುಂಪಿನ ಬೆಂಬಲಿಗರು ಮೆಣಸಿನ ಪುಡಿ ಎರಚಿದ್ದಾರೆ ಎಂದು ಭೋಯಿರ್ ಗುಂಪು ಆರೋಪಿಸಿದೆ.
ಪ್ರತಿಭಟನಾಕಾರರು ಮತ ಪತ್ರಗಳನ್ನು ಕೊಂಡೊಯ್ಯುತ್ತಿದ್ದ ಬಸ್ ಅನ್ನು ತಡೆದಾಗ, ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗಿ ವಾಹನಗಳನ್ನು ಧ್ವಂಸಗೊಳಿಸಿದ ಘಟನೆಯೂ ಜರುಗಿತು.
ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಉಪ ಪೊಲೀಸ್ ಆಯುಕ್ತ (ವಲಯ-5) ಪ್ರಶಾಂತ್ ಕದಮ್ ತಿಳಿಸಿದ್ದಾರೆ.