ನೇಪಾಳದಲ್ಲಿ ಹಿಂಸಾಚಾರ | ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ ಆಂಧ್ರ ಪ್ರವಾಸಿಗರು
“ನಾವು ಸುರಕ್ಷಿತವಾಗಿ ವಾಪಸ್ಸಾಗಿದ್ದಕ್ಕೆ ದೇವರಿಗೆ ಧನ್ಯವಾದ” ಎಂದು ನಿಟ್ಟುಸಿರಿಟ್ಟ ಪ್ರವಾಸಿಗರು
ಹೈದರಾಬಾದ್: ನೇಪಾಳಕ್ಕೆ ಪ್ರವಾಸಕ್ಕೆ ತೆರಳಿದ್ದ ಪ್ರವಾಸಿಗರು ಹಾಗೂ ಯಾತ್ರಾರ್ಥಿಗಳು ಸುರಕ್ಷಿತವಾಗಿ ಆಂಧ್ರಬಪ್ರದೇಶಕ್ಕೆ ಮರಳಿದ್ದು, ಅವರೆಲ್ಲ ನೇಪಾಳದ ಭಯಾನಕ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಎರಡು ದಿನಗಳ ಪ್ರವಾಸಕ್ಕೆ ತೆರಳಿದ್ದ ವಿಶಾಖಪಟ್ಟಣಂನ 10 ಮಂದಿ ಪ್ರವಾಸಿಗರು, ಮುಕ್ತಿನಾಥ್ ದೇವಾಲಯದ ಭೇಟಿಗೆ ತೆರಳುವುದಕ್ಕೂ ಮುನ್ನ, ತಮ್ಮ ಲಗೇಜ್ ಗಳನ್ನು ಪೋಖರಾದಲ್ಲಿರುವ ಹೋಟೆಲೊಂದರಲ್ಲಿ ಬಿಟ್ಟು ತೆರಳಿದ್ದರು.
ಅವರು ದೇವಾಲಯದಿಂದ ಮರಳಿದಾಗ, ಉದ್ರಿಕ್ತ ಗುಂಪು ತಾವು ಇಳಿದುಕೊಂಡಿದ್ದ ಹೋಟೆಲ್ ಗೆ ಬೆಂಕಿ ಹಚ್ಚಿರುವುದು ಹಾಗೂ ತಮ್ಮ ವಸ್ತುಗಳೆಲ್ಲ ಸುಟ್ಟು ಕರಕಲಾಗಿರುವುದು ಅವರ ಕಣ್ಣಿಗೆ ಬಿದ್ದಿದೆ. ಎಲ್ಲಿಯೂ ತೆರಳಲಾಗದೆ ಸಿಲುಕಿಕೊಂಡಿದ್ದ ಅವರನ್ನು ಗುಂಪೊಂದು ನೇಪಾಳಿ ಚಾಲಕರ ಮೂಲಕ ಸುರಕ್ಷಿತವಾಗಿ, ಸ್ಥಳೀಯ ದಾಳಿಕೋರರಿಂದ ರಕ್ಷಣೆ ಒದಗಿಸಿ ಸ್ಥಳಾಂತರಿಸಿತು ಎನ್ನಲಾಗಿದೆ.
“ನಾವು ವ್ಯಾನ್ ನಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ಬೀದಿಗಳಲ್ಲಿ ಅಕ್ಷರಶಃ ಸಿಲುಕಿಕೊಂಡಿದ್ದೆವು. ನಮ್ಮ ಹೃದಯಗಳು ಭಯದಿಂದ ಒಡೆದುಕೊಳ್ಳುತ್ತಿದ್ದವು. ನಮ್ಮನ್ನು ಸಮೀಪಿಸಿದ ಗುಂಪೊಂದು, ಕಾರಿನ ಕಿಟಕಿಯ ಗಾಜನ್ನು ಕೆಳಗಿಳಿಸುವಂತೆ ಆಗ್ರಹಿಸಿತು. ಆ ಕ್ಷಣ ನಮ್ಮ ಮೇಲೆ ದಾಳಿ ನಡೆಯಬಹುದು ಎಂದು ನಾವು ಭಾವಿಸಿದ್ದೆವು. ಆಗ ನಮ್ಮ ವ್ಯಾನ್ ಚಾಲಕ, ನಾವು ಭಾರತದಿಂದ ಆಗಮಿಸಿರುವ ಪ್ರವಾಸಿಗರು ಎಂದು ಆ ಗುಂಪಿಗೆ ತಿಳಿಸಿದ. ನಂತರ, ನಮ್ಮ ಗುಂಪಿನಲ್ಲಿ ಮಹಿಳೆಯರು ಇರುವುದನ್ನು ಕಂಡು ಅವರು ನಮ್ಮನ್ನು ಬಿಟ್ಟು ಕಳಿಸಿದರು. ಅವರು ತಮ್ಮ ಗುರುತನ್ನು ಮರೆಮಾಚಲು ತಮ್ಮ ಮುಖದ ಸುತ್ತ ಬಟ್ಟೆ ಸುತ್ತಿಕೊಂಡಿದ್ದರು. ನಾವು ಸುರಕ್ಷಿತವಾಗಿ ವಾಪಸು ಮರಳಿದ್ದಕ್ಕೆ ದೇವರಿಗೆ ಧನ್ಯವಾದಗಳು” ಎಂದು ಭಾರತೀಯ ಜೀವ ವಿಮಾ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಲಕ್ಷ್ಮಿ ಎಂಬ ಪ್ರವಾಸಿಗರು ನಿಟ್ಟುಸಿರು ಬಿಟ್ಟರು.
ಇದಕ್ಕೂ ಮುನ್ನ, ಆಂಧ್ರಪ್ರದೇಶದ 22 ಪ್ರವಾಸಿಗರು ರಸ್ತೆಯ ಮೂಲಕ, ಬಿಹಾರದ ಗಡಿಯಿಂದ ಭಾರತಕ್ಕೆ ಮರಳಿದ್ದರು. ಸಿಮಿಲ್ಕೋಟ್ ನಿಂದ ನೇಪಾಲ್ ಗಂಜ್ ಗೆ ಉತ್ತರ ಪ್ರದೇಶದ ಗಡಿಯ ಮೂಲಕ ಲಕ್ನೊದಿಂದ ವಿಶೇಷ ವಿಮಾನದಲ್ಲಿ ಇನ್ನುಳಿದ 12 ಮಂದಿಯನ್ನು ರವಾನಿಸಲಾಗಿತ್ತು.
ಸೌಜನ್ಯ: deccanherald.com