ಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಪಳನಿಸ್ವಾಮಿ ಆಯ್ಕೆ ಪ್ರಶ್ನಿಸಿದ ಅರ್ಜಿ ತಿರಸ್ಕರಿಸಿದ ಹೈಕೋರ್ಟ್
ಕೆ. ಪಳನಿಸ್ವಾಮಿ | Photo: PTI
ಚೆನ್ನೈ: ಎಡಿಎಂಕೆಯ ಪ್ರಧಾನ ಕಾರ್ಯದರ್ಶಿಯಾಗಿ ಇಡಪಳ್ಳಿ ಕೆ. ಪಳನಿಸ್ವಾಮಿ ಅವರನ್ನು ನಿಯೋಜಿಸಿರುವುದನ್ನು ಪ್ರಶ್ನಿಸಿ ಪಕ್ಷದ ನಾಯಕ ಒ. ಪನ್ನೀರ್ ಸೆಲ್ವಂ ಅವರು ಸಲ್ಲಿಸಿದ ಮನವಿಯನ್ನು ಮದ್ರಾಸ್ ಉಚ್ಚ ನ್ಯಾಯಾಲಯ ಶುಕ್ರವಾರ ತಿರಸ್ಕರಿಸಿದೆ.
ನ್ಯಾಯಮೂರ್ತಿಗಳಾದ ಆರ್. ಮಾಧವನ್ ಹಾಗೂ ಮುಹಮ್ಮದ್ ಶಫೀಕ್ ಅವರನ್ನು ಒಳಗೊಂಡ ವಿಭಾಗೀಯ ಪೀಠ, ಪಕ್ಷದ ಮಾಜಿ ಸಮನ್ವಯಕಾರ ಪನ್ನೀರ್‌ಸೆಲ್ವಂ ಹಾಗೂ ಅವರ ಮೂವರು ಬೆಂಬಲಿಗರಾದ ಪಿ.ಎಚ್. ಮನೋಜ್ ಪಾಂಡ್ಯನ್, ಆರ್. ವೈಧಿಲಿಂಗಂ ಹಾಗೂ ಜೆ.ಸಿ.ಡಿ. ಪ್ರಭಾಕರ್ ಅವರನ್ನು ಕಳೆದ ವರ್ಷ ಉಚ್ಚಾಟಿಸಿರುವುದರ ಮಧ್ಯ ಪ್ರವೇಶಿಸಲು ಕೂಡ ನಿರಾಕರಿಸಿತು.
ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ 2022 ಜುಲೈ 11ರಂದು ಸಾಮಾನ್ಯ ಮಂಡಳಿ ಸಭೆಯ ಸಂದರ್ಭ ಪನ್ನೀರ್‌ಸೆಲ್ವಂ ಹಾಗೂ ಅವರ ಮೂವರು ಬೆಂಬಲಿಗರನ್ನು ಉಚ್ಛಾಟಿಸಲಾಗಿತ್ತು. ಬಳಿಕ ಪನ್ನೀರ್‌ಸೆಲ್ವಂ ಅವರು ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಈ ಸಭೆಯಲ್ಲಿ ಪಳನಿಸ್ವಾಮಿ ಅವರನ್ನು ಪಕ್ಷದ ಮಧ್ಯಂತರ ಪ್ರಧಾನ ಕಾರ್ಯದರ್ಶಿಯನ್ನಾಗಿ ನಿಯೋಜಿಸಲಾಗಿತ್ತು. ಈ ಬೆಳವಣಿಗೆ ಪಕ್ಷದ ಎರಡು ಬಣಗಳ ನಡುವಿನ ಕಾನೂನು ಸಮರಕ್ಕೆ ಕಾರಣವಾಗಿತ್ತು.