×
Ad

ಬಂಗಲೆ ತೆರವನ್ನು ಪ್ರಶ್ನಿಸಿ ಮಹುವಾ ಮೊಯಿತ್ರಾ ಸಲ್ಲಿಸಿದ್ದ ಅರ್ಜಿಗೆ ಹಿನ್ನಡೆ

Update: 2023-12-19 22:16 IST

ಮಹುವಾ ಮೊಯಿತ್ರಾ | Photo: PTI 

ಹೊಸದಿಲ್ಲಿ: ಟಿಎಂಸಿ ನಾಯಕಿ ಹಾಗೂ ಉಚ್ಚಾಟನೆಗೊಂಡಿರುವ ಸಂಸದೆ ಮಹುವಾ ಮೊಯಿತ್ರಾ ಅವರು ತನಗೆ ಸರಕಾರಿ ಬಂಗಲೆಯ ಹಂಚಿಕೆಯನ್ನು ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ದಿಲ್ಲಿ ದಿಲ್ಲಿ ಹೈಕೋರ್ಟ್‌ಕ್ಕೆ ಸಲ್ಲಿಸಿದ್ದ ಅರ್ಜಿಗೆ ಹಿನ್ನಡೆಯಾಗಿದೆ. ಸರ್ವೋಚ್ಚ ನ್ಯಾಯಾಲಯದ ತೀರ್ಪು ಬಾಕಿಯಿರುವುದನ್ನು ದಿಲ್ಲಿ ಹೈಕೋರ್ಟ್‌ ಉಲ್ಲೇಖಿಸಿ ಅರ್ಜಿಯ ವಿಚಾರಣೆಯನ್ನು ಮುಂದಿನ ವರ್ಷದ ಜನವರಿ ನಾಲ್ಕಕ್ಕೆ ಮುಂದೂಡಿದೆ.

ಮಂಗಳವಾರ ಅರ್ಜಿಯನ್ನು ಕೈಗೆತ್ತಿಕೊಂಡಿದ್ದ ದಿಲ್ಲಿ ಹೈಕೋರ್ಟ್‌ನ ನ್ಯಾ.ಸುಬ್ರಮಣಿಯಂ ಪ್ರಸಾದ್ ಅವರು, ಮೊಯಿತ್ರಾ ಲೋಕಸಭೆಯಿಂದ ತನ್ನ ಉಚ್ಚಾಟನೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜ.3ಕ್ಕೆ ನಡೆಸಲಿದೆ ಎನ್ನುವುದನ್ನು ಉಲ್ಲೇಖಿಸಿ ವಿಚಾರಣೆಯನ್ನು ಜ.4ಕ್ಕೆ ಮುಂದೂಡಿದರು. ಮೊಯಿತ್ರಾರ ಅರ್ಜಿಗೆ ಸಂಬಂಧಿಸಿದಂತೆ ಡೈರೆಕ್ಟರ್ ಆಫ್ ಎಸ್ಟೇಟ್ಸ್ ಅವರಿಗೆ ನೋಟಿಸನ್ನು ಹೊರಡಿಸಲೂ ನಿರಾಕರಿಸಿದ ನ್ಯಾ.ಪ್ರಸಾದ್, ಸುಪ್ರೀಂ ಕೋರ್ಟ್ ನ ವಿಚಾರಣೆಯವರೆಗೆ ಕಾಯುವಂತೆ ಸೂಚಿಸಿದರು.

ಮೊಯಿತ್ರಾ ಸರಕಾರಿ ಬಂಗಲೆ ತೆರವನ್ನು ಪ್ರಶ್ನಿಸಿ ಸೋಮವಾರ ದಿಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು. ಡೈರೆಕ್ಟರ್ ಆಫ್ ಎಸ್ಟೇಟ್ಸ್ ಡಿ.11ರಂದು ಹೊರಡಿಸಿರುವ ಆದೇಶದಲ್ಲಿ 2024, ಜ.7ರೊಳಗೆ ಸರಕಾರಿ ಬಂಗಲೆಯನ್ನು ತೆರವುಗೊಳಿಸುವಂತೆ ಮೊಯಿತ್ರಾರಿಗೆ ನಿರ್ದೇಶನ ನೀಡಲಾಗಿದೆ.

ಮೊಯಿತ್ರಾ ದಿಲ್ಲಿ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ, 2024ರ ಸಾರ್ವತ್ರಿಕ ಚುನಾವಣೆಗಳ ಫಲಿತಾಂಶಗಳ ಘೋಷಣೆಯವರೆಗೆ ತಾನು ಈಗಿರುವ ನಿವಾಸದಲ್ಲಿಯೇ ವಾಸ್ತವ್ಯವನ್ನು ಮುಂದುವರಿಸಲು ಅವಕಾಶ ನೀಡುವಂತೆ ನಿರ್ದೇಶನವನ್ನು ಕೋರಿದ್ದಾರೆ.

ಸದನದಲ್ಲಿ ಪ್ರಶ್ನೆಗಳನ್ನು ಕೇಳಲು ಲಂಚ ಸ್ವೀಕರಿಸಿದ್ದ ಆರೋಪದಲ್ಲಿ ಮೊಯಿತ್ರಾ ಡಿ.8ರಂದು ಲೋಕಸಭೆಯಿಂದ ಉಚ್ಚಾಟನೆಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News