×
Ad

SIR 2.0: 11 ರಾಜ್ಯ–ಕೇಂದ್ರಾಡಳಿತ ಪ್ರದೇಶಗಳಲ್ಲಿ 3.67 ಕೋಟಿ ಹೆಸರುಗಳು ಕರಡು ಮತದಾರರ ಪಟ್ಟಿಯಿಂದ ಡಿಲೀಟ್

Update: 2025-12-24 11:39 IST

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ವಿಶೇಷ ತೀವ್ರ ಪರಿಷ್ಕರಣೆ (SIR) ಎರಡನೇ ಸುತ್ತಿನ ಬಳಿಕ ಪ್ರಕಟವಾದ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕರಡು ಮತದಾರರ ಪಟ್ಟಿಗಳಲ್ಲಿ 3.67 ಕೋಟಿ ಹೆಸರುಗಳನ್ನು ಕೈಬಿಡಲಾಗಿದೆ. ಇದು ಒಟ್ಟು ಮತದಾರರ ಸಂಖ್ಯೆಯ 10 ಶೇಕಡಕ್ಕಿಂತ ಸ್ವಲ್ಪ ಹೆಚ್ಚು. ಮೃತರು, ವಾಸಸ್ಥಳ ಬದಲಾವಣೆ ಮಾಡಿದವರು ಹಾಗೂ ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ನೋಂದಣಿ ಹೊಂದಿರುವುದು ಪಟ್ಟಿಯಿಂದ ಕೈಬಿಡಲು ಪ್ರಮುಖ ಕಾರಣಗಳಾಗಿವೆ.

ಎರಡನೇ ಸುತ್ತಿನ SIR ನಲ್ಲಿ 12ನೇ ಹಾಗೂ ಅಂತಿಮ ರಾಜ್ಯವಾದ ಉತ್ತರ ಪ್ರದೇಶದ ಕರಡು ಮತದಾರರ ಪಟ್ಟಿಯನ್ನು ಡಿ. 31ರಂದು ಪ್ರಕಟಿಸಲಾಗುವುದು. ಮಂಗಳವಾರ ಮಧ್ಯಪ್ರದೇಶ, ಛತ್ತೀಸ್‌ಗಢ, ಕೇರಳ ಮತ್ತು ಅಂಡಮಾನ್–ನಿಕೋಬಾರ್ ದ್ವೀಪಗಳ ಕರಡು ಪಟ್ಟಿಗಳು ಬಿಡುಗಡೆಯಾಗಿವೆ. ಪಶ್ಚಿಮ ಬಂಗಾಳ, ರಾಜಸ್ಥಾನ, ಗೋವಾ, ಪುದುಚೇರಿ, ಲಕ್ಷದ್ವೀಪ, ಗುಜರಾತ್ ಹಾಗೂ ತಮಿಳುನಾಡಿನ ಪಟ್ಟಿಗಳು ಇದಕ್ಕೂ ಮುನ್ನ ಕಳೆದ 10 ದಿನಗಳಲ್ಲಿ ಪ್ರಕಟವಾಗಿದ್ದವು.

ಚುನಾವಣಾ ಆಯೋಗದ ಪ್ರಕಾರ, ಜನವರಿ 22ರವರೆಗೆ ನಡೆಯುವ ಆಕ್ಷೇಪಣೆ ಸಲ್ಲಿಸುವ ಅವಧಿಯಲ್ಲಿ ಸೂಕ್ತ ನಮೂನೆಗಳನ್ನು ಸಲ್ಲಿಸುವ ಮೂಲಕ ನಿಜವಾದ ಮತದಾರರು ಕರಡು ಪಟ್ಟಿಗೆ ಮರುಸೇರ್ಪಡೆಯಾಗುವ ಅವಕಾಶವಿದೆ.

ಈ ವರ್ಷದ ಆರಂಭದಲ್ಲಿ ಬಿಹಾರದಲ್ಲಿ ನಡೆದ SIR ಮೊದಲ ಹಂತದಲ್ಲಿ 7.89 ಕೋಟಿ ಮತದಾರರ ಪೈಕಿ ಸುಮಾರು 65 ಲಕ್ಷ ಹೆಸರುಗಳನ್ನು ಅಳಿಸಲಾಗಿತ್ತು. ಬಳಿಕ ಆಕ್ಷೇಪಣೆ ಸಲ್ಲಿಸಲು ಇರುವ ಅವಧಿಯಲ್ಲಿ ಸುಮಾರು ಮೂರು ಲಕ್ಷ ಹೆಸರುಗಳು ಮರು ಸೇರ್ಪಡೆಯಾಗಿದ್ದು, ಹೊಸ ಸೇರ್ಪಡೆಗಳೊಂದಿಗೆ ಅಂತಿಮ ಮತದಾರರ ಸಂಖ್ಯೆ 7.42 ಕೋಟಿಗೆ ಏರಿತ್ತು.

10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಿಂದಿನ ಮತದಾರರ ಪಟ್ಟಿಯಲ್ಲಿದ್ದ 35.52 ಕೋಟಿ ಮತದಾರರ ಪೈಕಿ 31.85 ಕೋಟಿ ಹೆಸರುಗಳು ಕರಡು ಪಟ್ಟಿಯಲ್ಲಿ ಸ್ಥಾನ ಪಡೆದಿವೆ ಎಂಬುದು ವಿಶ್ಲೇಷಣೆಯಿಂದ ತಿಳಿದುಬಂದಿದೆ. ಈಗಾಗಲೇ ಡಿಲೀಟ್ ಮಾಡಿರುವ ಹೆಸರುಗಳಲ್ಲಿ 99.81 ಲಕ್ಷ ಮತದಾರರು ಮೃತಪಟ್ಟವರು ಎಂದು ಗುರುತಿಸಲಾಗಿದ್ದು, 2.47 ಕೋಟಿ ಮತದಾರರು ತಮ್ಮ ನೋಂದಾಯಿತ ವಿಳಾಸಗಳಿಂದ ಬೇರೆಡೆ ಸ್ಥಳಾಂತರಗೊಂಡಿದ್ದಾರೆ. ಇನ್ನೂ 18.60 ಲಕ್ಷ ಹೆಸರುಗಳು ಒಂದಕ್ಕಿಂತ ಹೆಚ್ಚು ಮತಗಟ್ಟೆಗಳಲ್ಲಿ ನೋಂದಾಯಿತವಾಗಿದ್ದ ಕಾರಣ ಅಳಿಸಲ್ಪಟ್ಟಿವೆ.

ರಾಜ್ಯವಾರು ವಿವರದಲ್ಲಿ ತಮಿಳುನಾಡಿನಲ್ಲಿ ಅತಿ ಹೆಚ್ಚು ಮತದಾರರನ್ನು ಅಳಿಸಲಾಗಿದ್ದು, 6.41 ಕೋಟಿ ಮತದಾರರಲ್ಲಿ 97.37 ಲಕ್ಷ (15.19%) ಹೆಸರುಗಳು ಕರಡು ಪಟ್ಟಿಯಿಂದ ಹೊರಗುಳಿದಿವೆ. ಗುಜರಾತ್‌ನಲ್ಲಿ 5.08 ಕೋಟಿ ಮತದಾರರಲ್ಲಿ 73.73 ಲಕ್ಷ (14.5%) ಹೆಸರುಗಳು ಕೈಬಿಡಲಾಗಿದೆ.

ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇಕಡಾವಾರು ಅಳಿಸುವಿಕೆ ಅಂಡಮಾನ್–ನಿಕೋಬಾರ್ ದ್ವೀಪಗಳಲ್ಲಿ ಗರಿಷ್ಠವಾಗಿದ್ದು, 3.10 ಲಕ್ಷ ಮತದಾರರಲ್ಲಿ 20.62% (64,014) ಹೆಸರುಗಳನ್ನು ಅಳಿಸಲಾಗಿದೆ. ಸಂಖ್ಯಾತ್ಮಕವಾಗಿ ಪುದುಚೇರಿ ಅಗ್ರಸ್ಥಾನದಲ್ಲಿದ್ದು, 10.21 ಲಕ್ಷ ಮತದಾರರಲ್ಲಿ 1.03 ಲಕ್ಷ (10.12%) ಹೆಸರುಗಳು ಕರಡು ಪಟ್ಟಿಗೆ ಸೇರಿಲ್ಲ.

ಮಧ್ಯಪ್ರದೇಶ (7.45%), ಪಶ್ಚಿಮ ಬಂಗಾಳ (7.59%), ರಾಜಸ್ಥಾನ (7.65%), ಗೋವಾ (8.44%) ಮತ್ತು ಕೇರಳ (8.65%) ರಾಜ್ಯಗಳಲ್ಲಿ ಮತದಾರರನ್ನು ಕೈಬಿಟ್ಟಿರುವ ಪ್ರಮಾಣ 7.45ರಿಂದ 8.65 ಶೇಕಡದ ನಡುವೆ ದಾಖಲಾಗಿದೆ. ಛತ್ತೀಸ್‌ಗಢದಲ್ಲಿ ಮಾತ್ರ 2.12 ಕೋಟಿ ಮತದಾರರಲ್ಲಿ 27.34 ಲಕ್ಷ ಹೆಸರುಗಳನ್ನು ಅಳಿಸಲಾಗಿದ್ದು, 12.88 ಶೇಕಡದಷ್ಟು ಮತದಾರರನ್ನು ಅಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News