ಯುಜಿಸಿ-ನೆಟ್ ಪರೀಕ್ಷೆ ರದ್ದತಿಯನ್ನು ಪ್ರಶ್ನಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ
ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ : ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳ ಬಳಿಕ ಯುಜಿಸಿ-ನೆಟ್ 2024 ಪರೀಕ್ಷೆಯನ್ನು ರದ್ದುಗೊಳಿಸಿದ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಕೆಲವು ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲು ಸರ್ವೋಚ್ಚ ನ್ಯಾಯಾಲಯವು ಸೋಮವಾರ ನಿರಾಕರಿಸಿದೆ. ಇಂತಹ ಅರ್ಜಿಗಳನ್ನು ಅಂಗೀಕರಿಸುವುದು ಅನಿಶ್ಚಿತತೆಯನ್ನು ಹೆಚ್ಚಿಸುತ್ತದೆ ಮತ್ತು ಸಂಪೂರ್ಣ ಅವ್ಯವಸ್ಥೆಗೆ ಕಾರಣವಾಗುತ್ತದೆ ಎಂದು ಅದು ಹೇಳಿದೆ.
ಅರ್ಜಿಯನ್ನು ತಿರಸ್ಕರಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು, ‘ಇದಕ್ಕೊಂದು ಅಂತ್ಯವಿರಲಿ. ನಾವು ಪರಿಪೂರ್ಣ ಜಗತ್ತಿನಲ್ಲಿಲ್ಲ. ಆ.21ರಂದು ಪರೀಕ್ಷೆ ನಡೆಯಲಿ ಬಿಡಿ, ಒಂಭತ್ತು ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯ ಬಗ್ಗೆ ಖಚಿತತೆಯನ್ನು ಹೊಂದಿರಲಿ. ನಾವು ಈಗ ಪರೀಕ್ಷೆಯನ್ನು ರದ್ದುಗೊಳಿಸಲು ಹೇಗೆ ಸಾಧ್ಯ?’ ಎಂದು ಪ್ರಶ್ನಿಸಿತು.
ಯುಜಿಸಿ-ನೆಟ್ ಪರೀಕ್ಷೆ ಜೂ.18ರಂದು ನಡೆದಿತ್ತು ಮತ್ತು ಮರುದಿನ ಸರಕಾರವು ಅದನ್ನು ರದ್ದುಗೊಳಿಸಿತ್ತು. ಪರಿಣಾಮವಾಗಿ ಆ.21ರಂದು ಹೊಸದಾಗಿ ಪರೀಕ್ಷೆ ನಡೆಯಲಿದೆ. ಈ ಹಂತದಲ್ಲಿ ಅರ್ಜಿದಾರರು ಸರಕಾರದ ನಿರ್ಧಾರವನ್ನು ಪ್ರಶ್ನಿಸಿದ್ದಾರೆ ಮತ್ತು ಸುಮಾರು ಎರಡು ತಿಂಗಳುಗಳು ಕಳೆದಿವೆ. ಅರ್ಜಿಯನ್ನು ಅಂಗೀಕರಿಸುವುದು ಅನಿಶ್ಚಿತತೆಯನ್ನು ಹೆಚ್ಚಿಸುತ್ತದೆ ಮತ್ತು ಸಂಪೂರ್ಣ ಅವ್ಯವಸ್ಥೆಗೆ ಕಾರಣವಾಗುತ್ತದೆ ಎಂದು ನ್ಯಾಯಾಲಯವು ಹೇಳಿತು.
ಈ ಹಿಂದೆ ಈ ವಿಷಯದಲ್ಲಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ವಜಾಗೊಳಿಸಿತ್ತು. ಅರ್ಜಿಯನ್ನು ವಕೀಲರು ಸಲ್ಲಿಸಿದ್ದಾರೆಯೇ ಹೊರತು ನೊಂದ ವಿದ್ಯಾರ್ಥಿಗಳಲ್ಲ ಎಂದು ಹೇಳಿತ್ತು.