‘ಭಾರತ ಮಾತೆ’ ಘೋಷಣೆ ಕೂಗದವರನ್ನು ಎನ್ ಕೌಂಟರ್ ನಲ್ಲಿ ಹತ್ಯೆಗೈಯ್ಯಬೇಕು: ಬಿಜೆಪಿ ಸಂಸದನ ವಿವಾದಾತ್ಮಕ ಹೇಳಿಕೆ
ಬಿಜೆಪಿ ಸಂಸದ ಬಂಡಿ ಸಂಜಯ್ (PTI)
ಹೈದರಾಬಾದ್: “ಭಾರತ ಮಾತೆ ಘೋಷಣೆ ಕೂಗದೆ ಪಾಕಿಸ್ತಾನ ಧ್ವಜ ಹಾರಿಸುತ್ತಿರುವವರನ್ನು ಎನ್ ಕೌಂಟರ್ ನಲ್ಲಿ ಗುಂಡಿಟ್ಟು ಕೊಲ್ಲಬೇಕು ಹಾಗೂ ಪಾಕಿಸ್ತಾನದಲ್ಲಿ ಹೂಳಬೇಕು” ಎಂದು ತೆಲಂಗಾಣದ ಬಿಜೆಪಿ ಸಂಸದ ಬಂಡಿ ಸಂಜಯ್ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು thenewsminute.com ವರದಿ ಮಾಡಿದೆ.
ಮುಸ್ಲಿಮರ ವಿರುದ್ಧ ಪ್ರಚೋದನಾಕಾರ ಹೇಳಿಕೆಗೆ ಕುಖ್ಯಾತರಾಗಿರುವ ಬಿಜೆಪಿ ಸಂಸದ ಹಾಗೂ ತೆಲಂಗಾಣ ಬಿಜೆಪಿ ಘಟಕದ ಮಾಜಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್, ಅಕ್ಟೋಬರ್ 10ರಂದು ಆದಿಲಾಬಾದ್ ನಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಚುನಾವಣಾ ಪ್ರಚಾರದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕರೀಂನಗರ ಸಂಸದರಾದ ಅವರು, ಬಿಜೆಪಿಯೇನಾದರು ತೆಲಂಗಾಣದಲ್ಲಿ ಅಧಿಕಾರಕ್ಕೆ ಬಂದರೆ, ಭೈನ್ಸಾದಲ್ಲಿ ಹಿಂದೂಗಳ ಮೇಲೆ ದಾಳಿ ನಡೆಸಿದವರನ್ನು ಥಳಿಸಲಾಗುವುದು ಹಾಗೂ ಬೀದಿಗಳಲ್ಲಿ ಅಟ್ಟಾಡಿಸಲಾಗುವುದು ಎಂದೂ ಹೇಳಿದ್ದಾರೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, “ಭೈನ್ಸಾದಲ್ಲಿ ಹಿಂದೂ ಸಮುದಾಯದ ಮೇಲೆ ದಾಳಿ ನಡೆಸಿ, ಹಾನಿಯೆಸಗಿರುವ ಜನರನ್ನು ಹಾಗೂ ಅಪ್ರಾಪ್ತರನ್ನು ಅತ್ಯಾಚಾರಗೈದಿರುವ ಎಐಎಂಐಎಂ ಕಾರ್ಯಕರ್ತರನ್ನು ನಗ್ನಗೊಳಿಸಿ, ಬೀದಿಗಳಲ್ಲಿ ಅಟ್ಟಾಡಿಸಿ ಹೊಡೆಯಲು ತೆಲಂಗಾಣದಲ್ಲಿ ಮೋದಿ ಆಡಳಿತ ಬರಲೇಬೇಕಿದೆ” ಎಂದು ಕರೆ ನೀಡಿದ್ದಾರೆ.
ತೆಲಂಗಾಣ ರಾಜ್ಯದಲ್ಲಿ ನವೆಂಬರ್ 30ರಂದು ವಿಧಾನಸಭಾ ಚುನಾವಣೆ ನಡೆಯಲಿದೆ.
ಸಂಸದರ ಈ ಹೇಳಿಕೆಯು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದ್ದು, ಮಾದರಿ ಚುನಾವಣಾ ನೀತಿ ಸಂಹಿತೆಯ ಪ್ರಕಾರ, ಮತ ಗಳಿಕೆಗಾಗಿ ಜಾತಿ ಅಥವಾ ಧರ್ಮಾಧಾರಿತವಾಗಿ ಮತ ಯಾಚನೆ ಮಾಡುವಂತಿಲ್ಲ.