ಇಂಗ್ಲಿಷ್ ಮಾತನಾಡುವವರು ನಾಚಿಕೆ ಪಡುವ ಕಾಲ ಶೀಘ್ರದಲ್ಲೇ ಬರಲಿದೆ: ಅಮಿತ್ ಶಾ
ಗೃಹ ಸಚಿವ ಅಮಿತ್ ಶಾ (PTI)
ಹೊಸದಿಲ್ಲಿ: ಭಾರತದಲ್ಲಿ, ಇಂಗ್ಲಿಷ್ ಮಾತನಾಡುವವರು ನಾಚಿಕೆ ಪಡುವ ಕಾಲ ಶೀಘ್ರದಲ್ಲೇ ಬರಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಭಾರತದ ಭಾಷಾ ಪರಂಪರೆಗೆ ಪ್ರಾಮುಖ್ಯತೆ ನೀಡುವಂತೆ ಹೇಳಿದ ಅಮಿತ್ ಶಾ, ಸ್ಥಳೀಯ ಭಾಷೆಗಳು ದೇಶದ ಗುರುತಾಗಿದೆ. ವಿದೇಶಿ ಭಾಷೆಗಳಿಗಿಂತ ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಿದ್ದಾರೆ.
ಮಾಜಿ ಐಎಎಸ್ ಅಧಿಕಾರಿ ಅಶುತೋಷ್ ಅಗ್ನಿಹೋತ್ರಿ ಬರೆದಿರುವ 'ಮೈ ಬೂಂದ್ ಸ್ವಯಂ, ಖುದ್ ಸಾಗರ್ ಹೂʼ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅಮಿತ್ ಶಾ, ಭಾರತ ವಸಾಹತುಶಾಹಿ ಪ್ರಭಾವವನ್ನು ಬಿಟ್ಟು ಹೆಮ್ಮೆಯಿಂದ ತನ್ನದೇ ಆದ ಭಾಷೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ʼಈ ದೇಶದಲ್ಲಿ ಇಂಗ್ಲಿಷ್ ಮಾತನಾಡುವವರು ನಾಚಿಕೆ ಪಡುವ ಸಮಯ ಶೀಘ್ರದಲ್ಲೇ ಬರಲಿದೆ. ಅಂತಹ ಸಮಾಜದ ಸೃಷ್ಟಿ ದೂರವಿಲ್ಲ. ದೃಢನಿಶ್ಚಯವುಳ್ಳವರು ಮಾತ್ರ ಬದಲಾವಣೆಯನ್ನು ತರಬಹುದು. ನಮ್ಮ ದೇಶದ ಭಾಷೆಗಳು ನಮ್ಮ ಸಂಸ್ಕೃತಿಯ ರತ್ನಗಳು ಎಂದು ನಾನು ನಂಬುತ್ತೇನೆ. ನಮ್ಮ ಭಾಷೆಗಳಿಲ್ಲದೆ ನಾವು ನಿಜವಾದ ಭಾರತೀಯರಾಗಲು ಸಾಧ್ಯವಿಲ್ಲʼ ಎಂದು ಹೇಳಿದರು.
ʼನಮ್ಮ ದೇಶ, ನಮ್ಮ ಸಂಸ್ಕೃತಿ, ನಮ್ಮ ಇತಿಹಾಸ ಮತ್ತು ನಮ್ಮ ಧರ್ಮವನ್ನು ಅರ್ಥಮಾಡಿಕೊಳ್ಳಲು ವಿದೇಶಿ ಭಾಷೆ ಸಾಕಾಗುವುದಿಲ್ಲ. ಅರೆಬೆಂದ ವಿದೇಶಿ ಭಾಷೆಗಳ ಮೂಲಕ ಸಂಪೂರ್ಣ ಭಾರತದ ಕಲ್ಪನೆಯನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ. ಭಾಷಾ ಹೋರಾಟ ಎಷ್ಟು ಕಷ್ಟಕರವಾಗಿದೆ ಎಂದು ನನಗೆ ಸಂಪೂರ್ಣವಾಗಿ ತಿಳಿದಿದೆ. ಆದರೆ, ಭಾರತೀಯ ಸಮಾಜವು ಅದನ್ನು ಗೆಲ್ಲುತ್ತದೆ ಎಂಬ ಸಂಪೂರ್ಣ ವಿಶ್ವಾಸವೂ ನನಗಿದೆ. ಮತ್ತೊಮ್ಮೆ ಸ್ವಾಭಿಮಾನದಿಂದ ನಾವು ನಮ್ಮ ದೇಶವನ್ನು ನಮ್ಮದೇ ಭಾಷೆಗಳಲ್ಲಿ ನಡೆಸುವ ಕಾಲ ಬರಲಿದೆ. ಜಗತ್ತನ್ನೂ ಮುನ್ನಡೆಸುತ್ತೇವೆʼ ಎಂದು ಹೇಳಿದರು.