ಇಸ್ಲಾಂ ಧರ್ಮ ಭಾರತದ ಭಾಗವಾಗಿದೆ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್
"ಇಸ್ಲಾಂ ಕಣ್ಮರೆಯಾಗುತ್ತದೆ ಎಂದು ಭಾವಿಸುವವರು ಹಿಂದೂ ಚಿಂತನೆಯನ್ನು ಅರ್ಥೈಸಿಕೊಂಡಿಲ್ಲ"
ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ (Photo: PTI)
ಹೊಸದಿಲ್ಲಿ: ಇಸ್ಲಾಂ ಧರ್ಮ ಯಾವಾಗ ಭಾರತಕ್ಕೆ ಬಂದಿದೆಯೋ ಆಗಲೇ ಭಾರತದ ಭಾಗವಾಗಿದೆ ಮತ್ತು ಅದು ಭಾರತದ ಭಾಗವಾಗಿಯೇ ಉಳಿಯಲಿದೆ. ಇಸ್ಲಾಂ ಕಣ್ಮರೆಯಾಗುತ್ತದೆ ಎಂದು ಭಾವಿಸುವವರು ಹಿಂದೂ ಚಿಂತನೆಯನ್ನು ಅರ್ಥೈಸಿಕೊಂಡಿಲ್ಲ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ ಎಂದು livemint.com ವರದಿ ಮಾಡಿದೆ.
ದಿಲ್ಲಿಯಲ್ಲಿ ನಡೆದ ಆರೆಸ್ಸೆಸ್ ಶತಮಾನೋತ್ಸವದ ಮೂರನೇ ದಿನ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋಹನ್ ಭಾಗವತ್, ಒಳನುಸುಳುವಿಕೆಯನ್ನು ನಿಲ್ಲಿಸಬೇಕು. ಇದಕ್ಕೆ ಸರಕಾರ ಕೆಲವು ಪ್ರಯತ್ನಗಳನ್ನು ಮಾಡುತ್ತಿದೆ. ನಮ್ಮ ದೇಶದಲ್ಲಿ ವಾಸಿಸುವ ಮುಸ್ಲಿಮರು ಸಹ ನಾಗರಿಕರು. ಅವರಿಗೂ ಉದ್ಯೋಗ ಬೇಕು. ನೀವು ಮುಸ್ಲಿಮರಿಗೆ ಉದ್ಯೋಗಗಳನ್ನು ಒದಗಿಸಲು ಬಯಸಿದರೆ, ನಮ್ಮ ದೇಶದಲ್ಲಿನ ಮುಸ್ಲಿಮರಿಗೆ ಉದ್ಯೋಗ ನೀಡಿ, ಹೊರಗಿನಿಂದ ಬರುವವರಿಗೆ ನಾವು ಅದನ್ನು ಏಕೆ ನೀಡಬೇಕು? ಅವರವರ ದೇಶ ಅವರ ಬಗ್ಗೆ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದು ಭಾಗವತ್ ಹೇಳಿದರು.
ಇದಕ್ಕೂ ಮೊದಲು, ಜನಸಂಖ್ಯೆಯ ಕುರಿತು ಮಾತನಾಡಿದ ಭಾಗವತ್, ಭಾರತದ ಪ್ರತಿಯೋರ್ವ ನಾಗರಿಕನು ಮೂರು ಮಕ್ಕಳನ್ನು ಹೊಂದುವುದು ಸೂಕ್ತ ಎಂದು ಹೇಳಿದರು.