ವೈದ್ಯೆಗೆ ಬೆದರಿಕೆ | ಜಮ್ಮುಕಾಶ್ಮೀರದ ಆಪ್ ಮುಖ್ಯಸ್ಥನ ವಿರುದ್ಧ ಪ್ರಕರಣ
ಮೆಹ್ರಾಜ್ ಮಲಿಕ್ (File photo)
ಶ್ರೀನಗರ: ದೋಡಾ ಜಿಲ್ಲೆಯ ವೈದ್ಯೆಯೋರ್ವರ ಮಾನಹಾನಿ, ಕ್ರಿಮಿನಲ್ ಬೆದರಿಕೆಯನ್ನೊಡ್ಡಿದ ಮತ್ತು ಅವರ ಘನತೆಯನ್ನು ಅವಮಾನಿಸಿದ ಆರೋಪದಲ್ಲಿ ಜಮ್ಮುಕಾಶ್ಮೀರದ ಆಪ್ ಮುಖ್ಯಸ್ಥ ಹಾಗೂ ಶಾಸಕ ಮೆಹ್ರಾಜ್ ಮಲಿಕ್ ವಿರುದ್ಧ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವೈದ್ಯಕೀಯ ಕಾಲೇಜೊಂದರಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಸ್ತ್ರೀರೋಗ ತಜ್ಞೆ ಗುರುವಾರ ದಾಖಲಿಸಿರುವ ದೂರಿನಲ್ಲಿ ಮಲಿಕ್ ಸಾಮಾಜಿಕ ಮಾಧ್ಯಮಗಳಲ್ಲಿ ಸಾರ್ವಜನಿಕವಾಗಿ ತನಗೆ ಬೆದರಿಕೆಯೊಡ್ಡಿದ್ದಾರೆ ಮತ್ತು ನಿಂದನಾತ್ಮಕ, ಲಿಂಗ ತಾರತಮ್ಯದ ಹಾಗೂ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ದೋಡಾ ಠಾಣೆಯಲ್ಲಿ ಮಲಿಕ್ ವಿರುದ್ಧ ಬಿಎನ್ಎಸ್ ನ ವಿವಿಧ ಕಲಮ್ಗಳಡಿ ಪ್ರಕರಣ ದಾಖಲಾಗಿದೆ.
‘‘ಮಲಿಕ್ ಆಸ್ಪತ್ರೆಯ ಭದ್ರತೆಗೂ ಬೆದರಿಕೆಯೊಡ್ಡಿದ್ದಾರೆ. ‘ನಿನ್ನನ್ನು ಎಳೆದಾಡುತ್ತೇನೆ’ ಮತ್ತು ‘ನಿನ್ನನ್ನು ಬೆತ್ತಲೆ ಮಾಡುತ್ತೇನೆ’ ಎಂದೂ ಅವರು ಬೆದರಿಕೆಯೊಡ್ಡಿದ್ದಾರೆ. ಇವು ಕೇವಲ ಪದಗಳಲ್ಲ,ಸರಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯೆಯಾಗಿ ನನ್ನ ಘನತೆ,ಸುರಕ್ಷತೆ ಮತ್ತು ವೃತ್ತಿಪರ ಸಮಗ್ರತೆಗೆ ನೇರ ಬೆದರಿಕೆಗಳಾಗಿವೆ. ಈ ಪದಗಳು ಸರಕಾರಿ ಉದ್ಯೋಗಿಯ ನಮ್ರತೆಗೆ,ಅದೂ ಸಾಮಾಜಿಕ ಮಾಧ್ಯಮಗಳಲ್ಲಿ,ಸ್ಪಷ್ಟವಾಗಿ ಧಕ್ಕೆಯನ್ನುಂಟು ಮಾಡಿವೆ’’ ಎಂದೂ ವೈದ್ಯೆ ಆರೋಪಿಸಿದ್ದಾರೆ.
‘‘ಶಾಸಕರು ನನ್ನನ್ನು ಮೂದಲಿಸಿದ್ದು ಇನ್ನೂ ಹೆಚ್ಚಿನ ನೋವನ್ನುಂಟು ಮಾಡಿದೆ. ‘ಈ ಆಸ್ಪತ್ರೆ ನಿಮ್ಮಪ್ಪಂದಲ್ಲ’ ಎಂದು ಅವರು ಹೇಳಿದ್ದು ಅವರ ದುರಹಂಕಾರವನ್ನು ಮಾತ್ರವಲ್ಲ, ನನ್ನ ತಂದೆ 12 ವರ್ಷಗಳ ಹಿಂದೆಯೇ ನಿಧನರಾಗಿರುವುದರಿಂದ ಸಂವೇದನಾಶೀಲತೆಯ ಕೊರತೆಯನ್ನೂ ಬಿಂಬಿಸುತ್ತಿದೆ’ ಎಂದು ದೂರಿನಲ್ಲಿ ತಿಳಿಸಿರುವ ವೈದ್ಯೆ, ‘ಸಾಮಾಜಿಕ ಮಾಧ್ಯಮಗಳಲ್ಲಿ ನೇರ ಪ್ರಸಾರ ಮಾಡುತ್ತಲೇ ಶಾಸಕರು ತನ್ನ ಸಹಚರರೊಂದಿಗೆ ಅನಧಿಕೃತವಾಗಿ ಹೆರಿಗೆ ವಾರ್ಡ್ ಪ್ರವೇಶಿಸಿದ್ದು, ಇದು ರೋಗಿಗಳ ಖಾಸಗಿತನದ ಸಂಪೂರ್ಣ ಉಲ್ಲಂಘನೆಯಾಗಿದೆ ಮತ್ತು ನಮ್ಮ ಆಸ್ಪತ್ರೆಯ ಭದ್ರತೆ ಮತ್ತು ನೈತಿಕ ವಾತಾವರಣಕ್ಕೆ ನೇರ ಬೆದರಿಕೆಯನ್ನೊಡ್ಡಿದೆ’ ಎಂದು ಆರೋಪಿಸಿದ್ದಾರೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ವೈದ್ಯೆ,‘ನಾನು ಅಧಿಕೃತವಾಗಿ ರಜೆಯಲ್ಲಿದ್ದೇನೆ ಮತ್ತು ಈ ವ್ಯಕ್ತಿ(ಮಲಿಕ್) ನನ್ನ ವಿರುದ್ಧ ಅಸಭ್ಯ ಭಾಷೆಯನ್ನು ಬಳಸಿದ್ದಾರೆ. ಅವರಿಗೆ ಸ್ತ್ರೀರೋಗ ವಿಭಾಗದ ಕಾರ್ಯ ನಿರ್ವಹಣೆಯ ಬಗ್ಗೆ ಏನಾದರೂ ಸಮಸ್ಯೆಯಿದ್ದರೆ ಅವರು ಅಧಿಕಾರಿಗಳಿಗೆ ದೂರು ಸಲ್ಲಿಸಬೇಕಿತ್ತು. ಆದರೆ ಅವರು ಹೆರಿಗೆ ವಾರ್ಡ್ ಗೆ ಬಲವಂತದಿಂದ ನುಗ್ಗಿ ಅಲ್ಲಿಯ ದೃಶ್ಯಗಳನ್ನು ನೇರ ಪ್ರಸಾರ ಮಾಡಿದ್ದಾರೆ. ಅವರು ನನ್ನ ವಿರುದ್ಧ ಏಕೆ ದ್ವೇಷವನ್ನು ಸಾಧಿಸುತ್ತಿದ್ದಾರೆ ಎನ್ನುವುದು ನನಗೆ ತಿಳಿದಿಲ್ಲ. ನಾನು ಈವರೆಗೆ ಅವರನ್ನು ನೋಡಿಯೂ ಇಲ್ಲ. 18 ವರ್ಷಗಳ ಹಿಂದೆ ದೋಡಾ ಆಸ್ಪತ್ರೆಯಲ್ಲಿ ಕರ್ತವ್ಯ ಆರಂಭಿಸಿದ್ದ ನಾನು ಈ ಎಲ್ಲ ವರ್ಷಗಳಲ್ಲಿ ಎಲ್ಲ ಸೌಲಭ್ಯಗಳನ್ನೂ ತಂದಿದ್ದೇನೆ. ಆ ವೇಳೆ ಈ ಮಲಿಕ್ ಎಲ್ಲಿಯೂ ಇರಲಿಲ್ಲ’ ಎಂದು ಹೇಳಿದರು.