ಜಾರ್ಖಂಡ್ ನಾಗರಿಕ ಸೇವಾ ಪರೀಕ್ಷೆಯ ಟಾಪರ್ ಸಹಿತ ಮೂವರ ನಿಗೂಢ ಸಾವು
ರಾಂಚಿ/ ಕೊಚ್ಚಿ: ಜಾರ್ಖಂಡ್ ನಾಗರಿಕ ಸೇವಾ ಆಯೋಗ (ಜೆಪಿಎಸ್ಸಿ) ನಡೆಸಿದ ಪರೀಕ್ಷೆಯ ಟಾಪರ್ ಹಾಗೂ ಐಆರ್ ಎಸ್ ಅಧಿಕಾರಿಯಾಗಿರುವ ಆಕೆಯ ಸಹೋದರ ಮತ್ತು ತಾಯಿ ಕೇರಳದ ಕೊಚ್ಚಿಯಲ್ಲಿರುವ ಸರ್ಕಾರಿ ನಿವಾಸದಲ್ಲಿ ನಿಗೂಢವಾಗಿ ಮೃತಪಟ್ಟಿದ್ದಾರೆ.
ಜೆಪಿಎಸ್ಸಿ ಪರೀಕ್ಷೆಯ ಆಯ್ಕೆ ಪ್ರಕ್ರಿಯೆಯ ಕ್ರಮಬದ್ಧತೆ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದ್ದು, ಈ ಸಂಬಂಧ ಆರು ದಿನಗಳ ಹಿಂದೆ ಇವರು ವಿಚಾರಣೆಗೆ ಹಾಜರಾಗಬೇಕಿತ್ತು. ನ್ಯಾಯಾಲಯಕ್ಕೆ ಹಾಜರಾಗಲು ವಿಫಲರಾಗಿದ್ದ ಇವರು ಇದೀಗ ಮೃತಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಜಾರ್ಖಂಡ್ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಹಾಯಕ ನಿರ್ದೇಕರಾಗಿ ಕಾರ್ಯ ನಿರ್ವಹಿಸುತ್ತಿರುವ ಶಾಲಿನಿ ವಿಜಯ್ 2020ರಿಂದ ರಜೆಯಲ್ಲಿದ್ದಾರೆ. ಈಕೆ ಹಾಗೂ ಕೇಂದ್ರೀಯ ಅಬ್ಕಾರಿ ಮತ್ತು ಕಸ್ಟಮ್ಸ್ ಇಲಾಖೆಯಲ್ಲಿ ಸಹಾಯಕ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಸಹೋದರ ಮನೀಶ್ ವಿಜಯ್ ತಾಯಿಯ ಜತೆಗೆ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದೆ.
ತಾಯಿಯ ಮೃತದೇಹವನ್ನು ಬಿಳಿ ಬಟ್ಟೆಯಿಂದ ಮುಚ್ಚಲಾಗಿತ್ತು ಹಾಗೂ ಹೂವನ್ನು ಸುತ್ತಲೂ ಚೆಲ್ಲಲಾಗಿತ್ತು. ಆದ್ದರಿಂದ ಸಹೋದರ- ಸಹೋದರಿ ಪ್ರತ್ಯೇಕ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನವೇ ತಾಯಿಯ ಸಾವು ಸಂಭವಿಸಿರಬೇಕು ಎಂದು ತನಿಖಾಧಿಕಾರಿಗಳು ಅಂದಾಜಿಸಿದ್ದಾರೆ. ಕೊಚ್ಚಿಯ ಕಾಕ್ಕನಾಡ್ ನಲ್ಲಿ ಮನೀಶ್ ಅವರಿಗೆ ಸರ್ಕಾರದಿಂದ ಹಂಚಿಕೆ ಮಾಡಲಾಗಿದ್ದ ವಸತಿ ಕಟ್ಟಡದಲ್ಲೇ ಈ ದುರಂತ ಸಂಭವಿಸಿದೆ.
ಮಗ ಹಾಗೂ ಮಗಳು ನೇಣಿಗೆ ಶರಣಾಗುವ ಮುನ್ನ ತಾಯಿ ಶಕುಂತಲಾ ಸಹಜ ಕಾರಣದಿಂದ ಮೃತಪಟ್ಟಿರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಟಾಪ್ಸಿ ಬಳಿಕ ಸಾವಿನ ಸಮಯ ಸೇರಿದಂತೆ ಇತರ ವಿವರಗಳನ್ನು ಸಮಗ್ರವಾಗಿ ಸಂಗ್ರಹಿಸಲಾಗುತ್ತದೆ ಎಂದು ಹೆಚ್ಚುವರಿ ಸಿಪಿ ವಿ.ಪಿ.ಬೋಬಿ ಹೇಳಿದ್ದಾರೆ.
ಮನೀಶ್, ಹಿಂದಿನ ದಿನ ಏಕೆ ಕೆಲಸಕ್ಕೆ ಹಾಜರಾಗಿಲ್ಲ ಎಂದು ಸಹೋದ್ಯೋಗಿಗಳು ಮನೆಗೆ ಬಂದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಫೆಬ್ರುವರಿ 15ರ ದಿನಾಂಕದ ದಿನಚರಿಯಲ್ಲಿ ದುಬೈನಲ್ಲಿರುವ ತಂಗಿಗೆ ಕೆಲ ದಾಖಲೆಗಳನ್ನು ಹಸ್ತಾಂತರಿಸುವಂತೆ ಸೂಚನೆ ನೀಡಿರುವುದು ಪತ್ತೆಯಾಗಿದೆ. ಆಕೆಯ ದೂರವಾಣಿ ಸಂಖ್ಯೆಯ ಉಲ್ಲೇಖವೂ ಇದೆ. 64 ಮಂದಿ ನಾಗರಿಕ ಸೇವಾ ಅಧಿಕಾರಿಗಳ ನೇಮಕಕ್ಕೆ ಜೆಪಿಎಸ್ ಸಿ 2003ರಲ್ಲಿ ನಡೆಸಿದ್ದ ಪರೀಕ್ಷೆಯಲ್ಲಿ ಶಾಲಿನಿ ಅಗ್ರಸ್ಥಾನಿಯಾಗಿದ್ದರು. ಈ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆಪಾದಿಸಿ ಕೆಲ ಮಂದಿ ನ್ಯಾಯಾಲಯದ ಮೊರೆ ಹೋದ ಹಿನ್ನೆಲೆಯಲ್ಲಿ ಕಾನೂನು ಹೋರಾಟ ನಡೆಯುತ್ತಿದೆ.