×
Ad

ಹುಲಿ ಮೂಳೆಗಳ ಪತ್ತೆ | ಹೆಚ್ಚುತ್ತಿರುವ ರಣಥಂಬೋರ್ ಅಭಯಾರಣ್ಯದ ಹುಲಿಗಳ ಬೇಟೆ

Update: 2025-07-02 21:05 IST

ಸಾಂದರ್ಭಿಕ ಚಿತ್ರ | PC : PTI 

ಜೈಪುರ: ರಾಜಸ್ಥಾನದ ರಣಥಂಬೋರ್ ಹುಲಿ ಅಭಯಾರಣ್ಯದಲ್ಲಿ ಹುಲಿಗಳ ಬೇಟೆ ನಿರಂತರವಾಗಿ ನಡೆಯುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತವಾಗಿದೆ. ಅಂತರ್‌ ರಾಜ್ಯ ಬೇಟೆಗಾರರ ತಂಡವೊಂದರಿಂದ ಕೊಲ್ಲಲ್ಪಟ್ಟಿರುವ ಮೂರು ಹುಲಿಗಳು ರಣಥಂಬೋರ್ ಅಭಯಾರಣ್ಯಕ್ಕೆ ಸೇರಿದ ಹುಲಿಗಳಾಗಿರುವ ಸಾಧ್ಯತೆ ಇದೆ ಎನ್ನುವುದು ಇತ್ತೀಚೆಗೆ ಬೆಳಕಿಗೆ ಬಂದ ನಂತರ, ಅಲ್ಲಿನ ಹುಲಿಗಳ ಸುರಕ್ಷತೆ ಬಗ್ಗೆ ಆತಂಕ ತಲೆದೋರಿದೆ.

ಮಧ್ಯಪ್ರದೇಶದ ರಾಜ್ಯ ಹುಲಿ ಪ್ರಹಾರ ಪಡೆ, ರಾಜಸ್ಥಾನ ಅರಣ್ಯ ಇಲಾಖೆ ಮತ್ತು ಸವಾಯ್ ಮಾಧೋಪುರದಲ್ಲಿರುವ ಸರಕಾರೇತರ ಸಂಘಟನೆ ‘ಟೈಗರ್ ವಾಚ್’ ಕಳೆದ ತಿಂಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಆರು ಬೇಟೆಗಾರರನ್ನು ಬಂಧಿಸಲಾಗಿತ್ತು. ಆ ಪೈಕಿ ಮೂವರು ರಾಜಸ್ಥಾನದವರು. ಜೂನ್ 5ರಂದು, ಮಧ್ಯಪ್ರದೇಶದ ಶೇವ್‌ ಪುರ್ ಸಮೀಪ 225ಕ್ಕೂ ಅಧಿಕ ಹುಲಿ ಮೂಳೆಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ವಶಪಡಿಸಿಕೊಳ್ಳಲಾಗಿರುವ ಮೂಳೆಗಳೊಂದಿಗೆ ಹೋಲಿಸಲು ರಣಥಂಬೋರ್ ಹುಲಿಗಳ ಡಿಎನ್‌ಎ ಮಾದರಿಗಳನ್ನು ಕಳುಹಿಸುವಂತೆ ಮಧ್ಯಪ್ರದೇಶ ಅರಣ್ಯ ಇಲಾಖೆಯ ಅಧಿಕಾರಿಗಳು ರಾಜಸ್ಥಾನ ಅರಣ್ಯ ಅಧಿಕಾರಿಗಳನ್ನು ಕೋರಿದ್ದಾರೆ.

ವಶಪಡಿಸಿಕೊಳ್ಳಲಾಗಿರುವ ಮೂಳೆಗಳು ಮೂರು ಹುಲಿಗಳು ಮತ್ತು ಒಂದು ಚಿರತೆಗೆ ಸೇರಿದ್ದಾಗಿವೆ ಎನ್ನುವುದು ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆಸಲಾದ ಡಿಎನ್‌ಎ ಪರೀಕ್ಷೆಯಲ್ಲಿ ಖಚಿತವಾಗಿದೆ. ರಣಥಂಬೋರ್ ಹುಲಿಗಳ ದತ್ತಾಂಶಗಳೊಂದಿಗೆ ನಿಖರ ಹೋಲಿಕೆಗಾಗಿ ಮಾದರಿಗಳನ್ನು ಈಗ ಬೆಂಗಳೂರಿನ ರಾಷ್ಟ್ರೀಯ ಜೈವಿಕ ವಿಜ್ಞಾನಗಳ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು ಆರು ತಿಂಗಳುಗಳ ಹಿಂದೆ ಒಂದು ಹುಲಿಯನ್ನು ಮತ್ತು ಮೂರು ತಿಂಗಳ ಹಿಂದೆ ಒಂದು ಚಿರತೆಯನ್ನು ಕೊಲ್ಲಲಾಗಿತ್ತು ಎನ್ನುವುದು ತನಿಖೆಯಿಂದ ತಿಳಿದುಬಂದಿದೆ. ಅವೆರಡನ್ನೂ ರಾಜಸ್ಥಾನದಲ್ಲೇ ಕೊಂದಿರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News