×
Ad

ಟೆರಿಟೊರಿ ಹುಡುಕಾಡುತ್ತಾ 450 ಕಿ.ಮೀ. ಸಂಚರಿಸಿದ ಹುಲಿ!

ದಶಕದಲ್ಲೇ ವ್ಯಾಘ್ರದ ಸುದೀರ್ಘ ಪಯಣ

Update: 2025-09-07 22:49 IST

Photo : Meta AI

ಛತ್ರಪತಿ ಸಂಭಾಜಿನಗರ: ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದ ತಿಪ್ಪೇಶ್ವರ ಅಭಯಾರಣ್ಯದಿಂದ ಹೊರಟ ಮೂರು ವರ್ಷ ಪ್ರಾಯದ ಗಂಡು ಹುಲಿಯೊಂದು ವಾಸಸ್ಥಾನ ಹುಡುಕುತ್ತಾ 450 ಕಿ.ಮೀ. ದೂರ ಸಂಚರಿಸಿ ಕೊನೆಗೆ ಧಾರಾಶಿವ್ ಜಿಲ್ಲೆಯ ಯೆದಶಿ ರಾಮಲಿಂಗ್‌ ಘಾಟ್‌ ವನ್ಯಜೀವಿ ಅಭಯಾರಣ್ಯದಲ್ಲಿ ತನ್ನ ನೆಲೆ ಕಂಡುಕೊಂಡಿದೆ. ದಶಕದ ಅವಧಿಯಲ್ಲಿಯೇ ವ್ಯಾಘ್ರವೊಂದರ ಸುದೀರ್ಘ ಸಂಚಾರವಾಗಿ ಈ ಮಹಾ ಪ್ರಮಾಣವು ದಾಖಲಾಗಿದೆ.

ತಿಪ್ಪೇಶ್ವರದಿಂದ ಪಯಣ ಆರಂಭಿಸಿದ ಹುಲಿ ನೆರೆಯ ತೆಲಂಗಾಣದ ಆದಿಲಾಬಾದ್ ಪ್ರದೇಶಕ್ಕೂ ತೆರಳಿದ್ದು, ನಂತರ ನಾಂದೇಡ್, ಅಹಮದ್‌ಪುರ ಮೂಲಕ ಕೊನೆಗೆ ಯೆದಶಿ ರಾಮಲಿಂಗ್ ಘಾಟ್‌ಗೆ ತಲುಪಿದೆ.

1997ರಲ್ಲಿ ಅಭಯಾರಣ್ಯವಾಗಿ ಘೋಷಿಸಲ್ಪಟ್ಟಿರುವ ಯೆದಶಿ ರಾಮಲಿಂಗ್ ಘಾಟ್ ಸುಮಾರು 22.50 ಚದರ ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ. ಇಲ್ಲಿ ಚಿರತೆ, ಕರಡಿ, ಜಿಂಕೆ, ನರಿ, ತೋಳ, ಹಲ್ಲಿ, ಮೊಲ ಸೇರಿದಂತೆ ಹಲವು ವನ್ಯಜೀವಿಗಳ ವಾಸಸ್ಥಾನಗಳಿವೆ ಎಂದು ವಲಯ ಅರಣ್ಯಾಧಿಕಾರಿ ಅಮೋಲ್ ಮುಂಡೆ ಮಾಹಿತಿ ನೀಡಿದ್ದಾರೆ.

ಯೆದಶಿ ಪ್ರದೇಶದ ಪ್ರಸಿದ್ಧ ಶಿವದೇವಾಲಯದ ಹೆಸರಿನಿಂದ ಹುಲಿಗೆ “ರಾಮಲಿಂಗ್” ಎಂದು ಅರಣ್ಯಾಧಿಕಾರಿಗಳು ಹೆಸರಿಟ್ಟಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಮೊಟ್ಟಮೊದಲ ಬಾರಿಗೆ ಹುಲಿ ಇಲ್ಲಿ ಕಾಣಿಸಿಕೊಂಡಿದ್ದು, ವನ್ಯಜೀವಿ ತಜ್ಞರು ಕ್ಯಾಮೆರಾ ಟ್ರ್ಯಾಪ್‌ ಚಿತ್ರಗಳ ಆಧಾರದಲ್ಲಿ ಅಧ್ಯಯನ ನಡೆಸಿ, ಇದು ತಿಪ್ಪೇಶ್ವರ ಅಭಯಾರಣ್ಯದಿಂದ ಬಂದದ್ದೇ ಎಂದು ದೃಢಪಡಿಸಿದ್ದಾರೆ.

ಯೆದಶಿ ಅಭಯಾರಣ್ಯದ ವ್ಯಾಪ್ತಿ ಹುಲಿಯ ವಾಸಸ್ಥಾನಕ್ಕೆ ಅಗತ್ಯವಿರುವಷ್ಟರ ನಾಲ್ಕನೇ ಭಾಗದಷ್ಟೇ ಇರುವುದರಿಂದ, ಹುಲಿ ಪಕ್ಕದ ಬಾರ್ಶಿ, ಭುಮ್, ತುಳಜಾಪುರ ಮತ್ತು ಧಾರಾಶಿವ್‌ ತಾಲೂಕುಗಳಲ್ಲಿಯೂ ಸಂಚರಿಸುತ್ತಿದೆ.

ಹುಲಿಗೆ ರೇಡಿಯೊ ಕಾಲರ್ ಅಳವಡಿಸಿ ಸಹ್ಯಾದ್ರಿ ಮೀಸಲು ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸುವ ಉದ್ದೇಶದಿಂದ ಜನವರಿ-ಏಪ್ರಿಲ್ ಅವಧಿಯಲ್ಲಿ 75 ದಿನಗಳ ಕಾರ್ಯಾಚರಣೆ ನಡೆದರೂ ಯಶಸ್ಸು ಸಿಕ್ಕಿಲ್ಲ. ಡ್ರೋನ್ ಬಳಸಿ ಹುಡುಕಾಟ ನಡೆದರೂ ಕೇವಲ ಎರಡು-ಮೂರು ಬಾರಿ ಮಾತ್ರ ದೃಶ್ಯಾವಳಿ ಸಿಕ್ಕಿತು.

ಅಭಯಾರಣ್ಯದಲ್ಲಿ ಕಾಡುಹಂದಿ, ಸಾಂಬಾರ್ ಜಿಂಕೆ, ನೀಲಗಾಯಿ, ಚಿಂಕಾರ ಸೇರಿದಂತೆ ಬೇಟೆ ಪ್ರಾಣಿಗಳು ಸಾಕಷ್ಟಿರುವುದರಿಂದ ಹುಲಿಗೆ ಆಹಾರ ಕೊರತೆ ಇಲ್ಲ. "ಮುಂಜಾನೆಗಳಲ್ಲಷ್ಟೇ ಕೆಲವೊಮ್ಮೆ ಹುಲಿಯನ್ನು ಕಾಣಬಹುದು," ಎಂದು ಮುಂಡೆ ವಿವರಿಸಿದರು.

“ಅಭಯಾರಣ್ಯದ ಹೊರಗೆ ಸಂಚರಿಸಿದರೂ ಮನುಷ್ಯರ ಮೇಲೆ ದಾಳಿ ನಡೆಸಿಲ್ಲ. ಆರಂಭಿಕ ದಿನಗಳಲ್ಲಿ ಜಾನುವಾರುಗಳ ಮೇಲೆ ಮಾತ್ರ ಬೇಟೆಯಾಡಿತ್ತು", ಎಂದು ವಲಯ ಅರಣ್ಯಾಧಿಕಾರಿ ಅಮೋಲ್ ಮುಂಡೆ ಹೇಳಿದ್ದಾರೆ .

"ರಾಮಲಿಂಗ್" ಮರಾಠವಾಡದಲ್ಲಿ ದಾಖಲಾಗಿರುವ ನಾಲ್ಕನೇ ಹುಲಿ. ಮೊದಲ ಹುಲಿ 1971ರಲ್ಲಿ ಗೌತಲಾ ವನ್ಯಜೀವಿ ಅಭಯಾರಣ್ಯದಲ್ಲಿ ಕಂಡುಬಂದಿತ್ತು. 2020ರವರೆಗೂ ಮತ್ತೊಂದು ಹುಲಿ ಕಾಣಿಸಲಿಲ್ಲ. ಪ್ರಸ್ತುತ, ನಾಂದೇಡ್ ಹಾಗೂ ತಿಪ್ಪೇಶ್ವರ ಅಭಯಾರಣ್ಯದ ನಡುವೆ ಇನ್ನೆರಡು ಹುಲಿಗಳು ಸಂಚರಿಸುತ್ತಿವೆ.

"ಈ ಪ್ರದೇಶದಲ್ಲಿ ಹುಲಿಗಳ ಚಲನವಲನವು ಕಾಡಿನ ಆರೋಗ್ಯದ ಸೂಚಕವಾಗಿದೆ. ಬೆಳೆ ರಕ್ಷಣೆಗೆ ರೈತರು ಅಳವಡಿಸಿರುವ ಕಡಿಮೆ ತೀವ್ರತೆಯ ವಿದ್ಯುತ್ ತಂತಿ ಬೇಲಿ ಹೊರತುಪಡಿಸಿ ಹುಲಿಗಳಿಗೆ ಯಾವುದೇ ಅಪಾಯವಿಲ್ಲ. ‘ರಾಮಲಿಂಗ್’ನ ಮೇಲ್ವಿಚಾರಣೆಗಾಗಿ ಗಸ್ತು ತಂಡಗಳನ್ನು ರಚಿಸಲಾಗಿದೆ," ಎಂದು ಮುಂಡೆ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News