ಕುದಿಯುತ್ತಿದ್ದ ಹಾಲಿನ ಪಾತ್ರೆಗೆ ಬಿದ್ದು ಮಗು ಮೃತ್ಯು
Photo credit: NDTV
ಕೊರ್ರಾಪಾಡು: ಕುದಿಯುತ್ತಿದ್ದ ಹಾಲಿನ ಪಾತ್ರೆಗೆ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದ 16 ತಿಂಗಳ ಮಗು ಮೃತಪಟ್ಟಿರುವ ಘಟನೆ ಅನಂತಪುರ ಜಿಲ್ಲೆಯ ಕೊರ್ರಾಪಾಡು ಗ್ರಾಮದ ಗುರುಕುಲ ಶಾಲೆಯಲ್ಲಿ ನಡೆದಿದೆ ಎಂದು ರವಿವಾರ ಪೊಲೀಸರು ತಿಳಿಸಿದ್ದಾರೆ. ಅಕ್ಷಿತಾ ಮೃತಪಟ್ಟ ಮಗು.
ಸೆಪ್ಟೆಂಬರ್ 20ರಂದು ಈ ಘಟನೆ ನಡೆದಿದ್ದು, ಮಗು ಬೆಕ್ಕನ್ನು ಅಟ್ಟಿಸಿಕೊಂಡು ಹೋಗುವಾಗ, ಶಾಲಾ ಅಡುಗೆ ಕೋಣೆಯಲ್ಲಿ ಕುದಿಯುತ್ತಿರುವ ಹಾಲಿನ ಪಾತ್ರೆಗೆ ಆಕಸ್ಮಿಕವಾಗಿ ಜಾರಿ ಬಿದ್ದಿದೆ ಎಂದು ವರದಿಯಾಗಿದೆ.
ಮಗುವಿನ ತಾಯಿ ಕೃಷ್ಣವೇಣಿ ಶಾಲೆಯೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ವಿದ್ಯಾರ್ಥಿಗಳಿಗೆ ವಿತರಿಸಲು ಸಿದ್ಧಪಡಿಸಿದ್ಧ ಬಿಸಿ ಹಾಲನ್ನು ತಣ್ಣಗಾಗಿಸಲು ಸೀಲಿಂಗ್ ಫ್ಯಾನ್ ಅಡಿಯಲ್ಲಿ ಇಡಲಾಗಿತ್ತು. ತಾಯಿ ಅಡುಗೆಮನೆಯಲ್ಲಿ ಇಲ್ಲದ ವೇಳೆ ಬೆಕ್ಕನ್ನು ಹಿಂಬಾಲಿಸಿಕೊಡು ಹೋದ ಮಗು ಕುದಿಯುತ್ತಿದ್ದ ಹಾಲಿನ ಪಾತ್ರೆಯೊಳಗೆ ಬಿದ್ದಿದೆ ಎನ್ನಲಾಗಿದೆ.
ತೀವ್ರ ಸುಟ್ಟ ಗಾಯಗಳಾಗಿದ್ದ ಮಗುವನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ.
ಮಗುವಿಗೆ ಮೊದಲು ಸ್ಥಳೀಯ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ನಂತರ, ಕರ್ನೂಲ್ ನ ಖಾಸಗಿ ಆಸ್ಪತ್ರೆಯೊಂದಕ್ಕೆ ಸ್ಥಳಾಂತರಿಸಲಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಮಗುವಿಗೆ ಮೂರು ದಿನಗಳ ಕಾಲ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ, ಸೆಪ್ಟೆಂಬರ್ 23ರಂದು ಮೃತಪಟ್ಟಿದೆ ಎಂದು ಅವರು ಹೇಳಿದ್ದಾರೆ.
ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 194ರ ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.