×
Ad

ಢಾಕಾದಲ್ಲಿ 5.5 ತೀವ್ರತೆಯ ಭೂಕಂಪನ; ಕೋಲ್ಕತ್ತಾ, ಈಶಾನ್ಯ ಭಾರತದಲ್ಲೂ ಕಂಪನದ ಅನುಭವ

Update: 2025-11-21 11:40 IST

ಸಾಂದರ್ಭಿಕ ಚಿತ್ರ (PTI)

ಢಾಕಾ/ಕೋಲ್ಕತ್ತಾ: ಶುಕ್ರವಾರ ಬೆಳಗ್ಗೆ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ 5.5 ತೀವ್ರತೆಯ ಭೂಕಂಪನ ಸಂಭವಿಸಿದ್ದು, ಕೋಲ್ಕತ್ತಾ ಹಾಗೂ ಈಶಾನ್ಯ ಭಾರತದ ಹಲವು ಭಾಗಗಳಲ್ಲೂ ಕಂಪನದ ಅನುಭವ ಆಗಿದೆ ಎಂದು ವರದಿಯಾಗಿದೆ.

ಭೂಕಂಪನ ಕೇಂದ್ರವು ಢಾಕಾದಿಂದ 50 ಕಿಮೀ ದೂರವಿರುವ ನರ್ಸಿಂಗ್ಡಿಯ 10 ಕಿಮೀ ಆಳದಲ್ಲಿ ಕೇಂದ್ರೀಕೃತವಾಗಿತ್ತು ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಆದರೆ, ಇದುವರೆಗೆ ಯಾವುದೇ ಜೀವ ಹಾನಿ ಅಥವಾ ಆಸ್ತಿಪಾಸ್ತಿ ಹಾನಿಯ ವರದಿಯಾಗಿಲ್ಲ.

ಕೋಲ್ಕತ್ತಾದಲ್ಲಿ ಮುಂಜಾನೆ ಸುಮಾರು 10.10 ಗಂಟೆಗೆ ಕೆಲವು ಸೆಕೆಂಡುಗಳ ಕಾಲ ಹಲವು ಜನರಿಗೆ ಕಂಪನದ ಅನುಭವವಾಗಿದ್ದು, ಇದರಿಂದ ಭಯಭೀತರಾದ ಅವರೆಲ್ಲ ತಮ್ಮ ಮನೆಗಳು ಹಾಗೂ ಕಟ್ಟಡಗಳಿಂದ ಹೊರಗೋಡಿ ಬಂದರು ಎಂದು ಹೇಳಲಾಗಿದೆ.

ಕೋಲ್ಕತ್ತಾದಲ್ಲಿ ಆಗಿರುವ ಕಂಪನದ ಅನುಭವದ ವಿಡಿಯೊಗಳನ್ನು ಹಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ಇದಲ್ಲದೆ, ಕೂಚ್ ಬಿಹಾರ್, ದಕ್ಷಿಣ ಮತ್ತು ಉತ್ತರ ದಿನಾಜ್ಪುರ್ ಸೇರಿದಂತೆ ಪಶ್ಚಿಮ ಬಂಗಾಳದ ಇನ್ನಿತರ ಭಾಗಗಳಲ್ಲೂ ಕಂಪನದ ಅನುಭವವಾಗಿದೆ.

ಗುವಾಹಟಿ, ಅಗರ್ತಲ ಹಾಗೂ ಶಿಲ್ಲಾಂಗ್ ಸೇರಿದಂತೆ ಕೆಲವು ಈಶಾನ್ಯ ಭಾರತದ ನಗರಗಳಲ್ಲೂ ಕಂಪನದ ಅನುಭವವಾಗಿದೆ ಎಂದು ಹಲವಾರು ನಿವಾಸಿಗಳು ಹೇಳಿದ್ದಾರೆ.

ಈ ಭೂಕಂಪನದಿಂದ ಢಾಕಾದಲ್ಲಿ ಬಾಂಗ್ಲಾದೇಶ ಮತ್ತು ಐರ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಪಂದ್ಯಕ್ಕೂ ಕೊಂಚ ಹೊತ್ತು ಅಡಚಣೆಯಾಯಿತು ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News