ತೆರಿಗೆದಾರರ ಹಣದಲ್ಲಿ ಅತಿ ಹೆಚ್ಚು ಪ್ರಯಾಣಿಸಿದ ಪ್ರಧಾನಿ: 5 ದೇಶಗಳಿಗೆ ಮೋದಿ ವಿದೇಶ ಪ್ರವಾಸದ ಬಗ್ಗೆ ಮಹುವಾ ಮೊಯಿತ್ರಾ ವಾಗ್ದಾಳಿ
ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ (PTI)
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರ ಐದು ದೇಶಗಳ ವಿದೇಶ ಪ್ರವಾಸದ ಬಗ್ಗೆ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಟೀಕಿಸಿದ್ದಾರೆ. ಮೋದಿ ನಾಯಕತ್ವದಲ್ಲಿ ಭಾರತದ ಅಂತಾರಾಷ್ಟ್ರೀಯ ಸ್ಥಾನಮಾನದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಮೋದಿಯ ಪ್ರವಾಸದಿಂದ ವಿದೇಶಾಂಗ ನೀತಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.
ʼಗೌರವಾನ್ವಿತ ಪ್ರಧಾನ ಮಂತ್ರಿಗಳು ಮತ್ತೊಂದು ದೀರ್ಘ ವಿದೇಶ ಪ್ರವಾಸಕ್ಕೆ ಹೊರಟಿದ್ದಾರೆ. ವಿಶ್ವಾದ್ಯಂತ ಸಂಚರಿಸುತ್ತಿರುವ ಗೌರವಾನ್ವಿತ ಪ್ರಧಾನ ಮಂತ್ರಿಗಳಿಗೆ ಕೆಲವು ಪ್ರಶ್ನೆಗಳಿವೆ. ನೀವು ತೆರಿಗೆದಾರರ ಹಣದಿಂದ ಅತಿ ಹೆಚ್ಚು ಪ್ರಯಾಣಿಸಿದ ಪ್ರಧಾನಿಯಾಗಿದ್ದೀರಿ. ಇದು ಭಾರತದ ಜಾಗತಿಕ ನೀತಿಯನ್ನು ಬಲಪಡಿಸಿದೆ ಎಂದು ಪ್ರಧಾನಿ ಹೇಳುತ್ತಾರೆ, ಆದರೆ ಸತ್ಯ ಬೇರೆಯೇ ಇದೆʼ ಎಂದು ಮಹುವಾ ಮೊಯಿತ್ರಾ ಹೇಳಿದರು.
ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರ ಭೇಟಿಯನ್ನು ಉಲ್ಲೇಖಿಸಿ ವೀಡಿಯೊ ಹೇಳಿಕೆ ನೀಡಿದ ಮೊಯಿತ್ರಾ, ವಿಶ್ವದ ಅತ್ಯಂತ ಶಕ್ತಿಶಾಲಿ ದೇಶದ ನಾಯಕ ಭಯೋತ್ಪಾದನೆಯ ಭದ್ರಕೋಟೆಯ ಬಗ್ಗೆ ಪ್ರೀತಿ ವ್ಯಕ್ತಪಡಿಸುತ್ತಾರೆ ಮತ್ತು ಅದರ ಸೇನಾ ಮುಖ್ಯಸ್ಥರೊಂದಿಗೆ ಊಟ ಮಾಡುತ್ತಾರೆ. ಭಾರತ ಮತ್ತು ಪಾಕಿಸ್ತಾನವನ್ನು ಸಮಾನವಾಗಿ ಕಾಣಲಾಗುತ್ತಿದೆ. 10 ವರ್ಷಗಳ ಹಿಂದೆ ಇದು ಊಹಿಸಲೂ ಕಷ್ಟವಾಗಿತ್ತು ಎಂದು ಹೇಳಿದ್ದಾರೆ.
ಭಾರತದ ವಿದೇಶಾಂಗ ನೀತಿಯು ಪಾಕಿಸ್ತಾನವನ್ನು ಜಾಗತಿಕವಾಗಿ ಪ್ರತ್ಯೇಕಿಸುವಲ್ಲಿ ಏಕೆ ವಿಫಲವಾಗಿದೆ? ಮಾನ್ಯ ಪ್ರಧಾನ ಮಂತ್ರಿಗಳೇ, ನಿಮ್ಮ ಮತ್ತು ವಿದೇಶಾಂಗ ಸಚಿವಾಲಯದ ಎಲ್ಲಾ ಪ್ರಯತ್ನಗಳು ಮತ್ತು ರಾಜತಾಂತ್ರಿಕ ಪ್ರಯತ್ನಗಳ ನಂತರವೂ ನಾವು ಪಾಕಿಸ್ತಾನವನ್ನು ರಾಜತಾಂತ್ರಿಕವಾಗಿ ಪ್ರತ್ಯೇಕಿಸಲು ಯಾಕೆ ಸಾಧ್ಯವಾಗಲಿಲ್ಲ?ಎಂದು ಪ್ರಶ್ನಿಸಿದರು.
ಭಾರತ ಮತ್ತು ಪಾಕಿಸ್ತಾನ ನಡುವಿನ ನಡುವಿನ ಕದನ ವಿರಾಮಕ್ಕೆ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ಹೇಳುತ್ತಿರುವ ಬಗ್ಗೆಯೂ ಮೊಯಿತ್ರಾ ಪ್ರಧಾನಿಯವರನ್ನು ಪ್ರಶ್ನಿಸಿದ್ದಾರೆ.