ತ್ರಿಪುರಾ: ಗೂಡ್ಸ್ ರೈಲಿನಿಂದ 2 ಕೋಟಿ ರೂಪಾಯಿ ಮೌಲ್ಯದ ನಿಷೇಧಿತ ಕೆಮ್ಮಿನ ಸಿರಪ್ ವಶ
ಸಾಂದರ್ಭಿಕ ಚಿತ್ರ | Photo Credi : freepik.com
ಅಗರ್ತಲಾ, ಅ. 17: ತ್ರಿಪುರಾದ ವೆಸ್ಟ್ ತ್ರಿಪುರಾ ಜಿಲ್ಲೆಯ ಜಿರಾನಿಯಾ ರೈಲು ನಿಲ್ದಾಣದಲ್ಲಿ ನಿಂತ ಗೂಡ್ಸ್ ರೈಲುಗಳಿಂದ ಸುಮಾರು 2 ಕೋ.ರೂ. ಮೌಲ್ಯದ ನಿಷೇಧಿತ ಕೆಮ್ಮಿನ ಸಿರಪ್ ಅನ್ನು ತ್ರಿಪುರಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಸರಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ), ಕಸ್ಟಮ್ಸ್ ಇಲಾಖೆ ಹಾಗೂ ವಿಶೇಷ ಕಾರ್ಯ ಪಡೆ (ಎಸ್‌ಟಿಎಫ್) ಗುರುವಾರ ನಡೆಸಿದ ಸಂಘಟಿತ ಶೋಧ ಕಾರ್ಯಾಚರಣೆ ಸಂದರ್ಭ ಈ ನಿಷೇಧಿತ ಕೆಮ್ಮಿನ ಸಿರಪ್ ಗಳು ಪತ್ತೆಯಾಗಿವೆ. ಈ ಶೋಧ ಕಾರ್ಯಾಚರಣೆ ಸಂಜೆ 4.30ಕ್ಕೆ ಆರಂಭವಾಗಿತ್ತು ಹಾಗೂ ಶುಕ್ರವಾರ ಮುಂಜಾನೆ ವರೆಗೆ ಮುಂದುವರಿದಿತ್ತು ಎಂದು ಅವರು ತಿಳಿಸಿದ್ದಾರೆ.
‘‘ಔಷಧ ಕಳ್ಳ ಸಾಗಾಟದ ವಿರುದ್ಧದ ಹೋರಾಟದ ಪ್ರಮುಖ ಬೆಳವಣಿಗೆಯೊಂದರಲ್ಲಿ ಸರಕಾರಿ ರೈಲ್ವೆ ಪೊಲೀಸ್ ಪಡೆ (ಜಿಆರ್‌ಪಿ), ಕಸ್ಟಮ್ ಇಲಾಖೆ ಹಾಗೂ ವಿಶೇಷ ಕಾರ್ಯ ಪಡೆ (ಎಸ್‌ಟಿಎಫ್)ಗುರುವಾರ ಜಂಟಿ ಕಾರ್ಯಾಚರಣೆ ನಡೆಸಿದೆ’’ ಎಂದು ಅಧಿಕೃತ ಪತ್ರಿಕಾ ಹೇಳಿಕೆ ತಿಳಿಸಿದೆ.
‘‘ಸಂಘಟಿತ ದಾಳಿ ಸಂದರ್ಭ ಪಶ್ಚಿಮ ತ್ರಿಪುರಾದ ಜಿರಾನಿಯಾ ರೈಲು ನಿಲ್ದಾಣದಲ್ಲಿ ನಿಲ್ಲಿಸಿದ್ದ 2 ಗೂಡ್ಸ್ ರೈಲಿನ ಬೋಗಿಗಳಲ್ಲಿ ನಿಷೇಧಿತ ಕೆಮ್ಮಿನ ಸಿರಪ್ ಎಸ್‌ಕಫ್ (100 ಮಿ.ಲೀ.)ನ 90,000 ಬಾಟಲಿಗಳನ್ನು ಪತ್ತೆ ಮಾಡಿದೆೆ’’ ಎಂದು ಅದು ಹೇಳಿದೆ.
ಈ ವಶಪಡಿಸಿಕೊಳ್ಳಲಾದ ಸಿರಪ್ ಬಾಟಲಿಗಳ ಅಂದಾಜು ಮೊತ್ತ ಸುಮಾರು 2 ಕೋ. ರೂ. ಈ ವಶಕ್ಕೆ ಸಂಬಂಧಿಸಿ ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮಾದಕ ವಸ್ತುವಾಗಿ ಆಗಾಗ ದುರ್ಬಳಕೆಯಾಗುತ್ತಿರುವ ಎಸ್ಕಫ್ ಕೆಮ್ಮಿನ ಸಿರಪ್ ಅನ್ನು ಎನ್‌ಡಿಪಿಎಸ್ ಕಾಯ್ದೆ ಅಡಿ ನಿಷೇಧಿಸಲಾಗಿದೆ.