ಗಾಝಾ ಶಾಂತಿ ಮಂಡಳಿ ಸೇರಲು ನಿರಾಕರಿಸಿದ ಫ್ರಾನ್ಸ್ ಮೇಲೆ ಶೇ. 200 ಸುಂಕ ವಿಧಿಸುವ ಬೆದರಿಕೆ ಒಡ್ಡಿದ ಟ್ರಂಪ್
ಡೊನಾಲ್ಡ್ ಟ್ರಂಪ್ | Photo Credit : AP \ PTI
ವಾಷಿಂಗ್ಟನ್: ಗಾಝಾ ಶಾಂತಿ ಮಂಡಳಿಯನ್ನು ಸೇರುವಂತೆ ತಾನು ನೀಡಿದ್ದ ಆಹ್ವಾನವನ್ನು ನಿರಾಕರಿಸಿದ್ದಕ್ಕೆ ಪ್ರತೀಕಾರವಾಗಿ ಫ್ರಾನ್ಸ್ ನ ವೈನ್ ಹಾಗೂ ಶಾಂಪೇನ್ ಮೇಲೆ ಶೇ. 200ರಷ್ಟು ಸುಂಕ ವಿಧಿಸಲಾಗುವುದು ಎಂದು ಡೊನಾಲ್ಡ್ ಟ್ರಂಪ್ ಬೆದರಿಕೆ ಒಡ್ಡಿದ್ದಾರೆ. ಅಲ್ಲದೆ, ಗ್ರೀನ್ ಲ್ಯಾಂಡ್ ಕುರಿತು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ತಮಗೆ ರವಾನಿಸಿರುವ ಖಾಸಗಿ ಸಂದೇಶವನ್ನು ಅವರು ತಮ್ಮ ಟ್ರುತ್ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.
ಡೆನ್ಮಾರ್ಕ್ ನ ಅರ್ಕಾಟಿಕ್ ಪ್ರಾಂತ್ಯವಾದ ಗ್ರೀನ್ ಲ್ಯಾಂಡ್ ಮೇಲೆ ಟ್ರಂಪ್ ಏಕೆ ಹಕ್ಕು ಸ್ಥಾಪಿಸುತ್ತಿದ್ದಾರೆ ಎಂಬ ಅಮೆರಿಕ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ರ ಸಮರ್ಥನೆಯನ್ನು ಫ್ರಾನ್ಸ್ ಹಂಗಿಸಿ, ತಳ್ಳಿ ಹಾಕಿದ್ದಕ್ಕೆ ಪ್ರತಿಯಾಗಿ ಡೊನಾಲ್ಡ್ ಟ್ರಂಪ್ ಅವರು ಫ್ರಾನ್ಸ್ ವಿರುದ್ಧ ತೀವ್ರ ದಾಳಿ ನಡೆಸತೊಡಗಿದ್ದಾರೆ.
“ನಾನು ಆತನ ವೈನ್ ಹಾಗೂ ಶಾಂಪೇನ್ ಮೇಲೆ ಶೇ. 200ರಷ್ಟು ಸುಂಕ ವಿಧಿಸಲಿದ್ದೇನೆ. ಆಗ ಆತ ನಮ್ಮೊಂದಿಗೆ ಸೇರ್ಪಡೆಯಾಗಲಿದ್ದಾರೆ. ಆದರೆ, ಆತ ನಮ್ಮೊಂದಿಗೆ ಸೇರ್ಪಡೆಯಾಗುವ ಅಗತ್ಯವಿಲ್ಲ” ಎಂದು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ರನ್ನುದ್ದೇಶಿಸಿ ಟ್ರಂಪ್ ಹೇಳಿದ್ದಾರೆ.
ಖಾಸಗಿ ಸಂದೇಶ ಹಂಚಿಕೊಂಡ ಟ್ರಂಪ್
ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ತಮಗೆ ರವಾನಿಸಿರುವ ಖಾಸಗಿ ಸಂದೇಶವನ್ನು ಡೊನಾಲ್ಡ್ ಟ್ರಂಪ್ ಹಂಚಿಕೊಂಡಿದ್ದಾರೆ. ಅದರಲ್ಲಿ, “ನನಗೆ ಇರಾನ್ ಹಾಗೂ ಸಿರಿಯಾ ವಿಷಯಗಳ ಬಗ್ಗೆ ಸಮ್ಮತಿಯಿದೆ. ಆದರೆ, ಗ್ರೀನ್ ಲ್ಯಾಂಡ್ ವಿಚಾರದಲ್ಲಿ ಟ್ರಂಪ್ ಏನು ಮಾಡಲು ಹೊರಟಿದ್ದಾರೆ ಎಂದು ನನಗೆ ಅರ್ಥವಾಗುತ್ತಿಲ್ಲ” ಎಂದು ಎಮ್ಯಾನುಯೆಲ್ ಮ್ಯಾಕ್ರನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ದಾವೋಸ್ ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆಯ ಸಭೆಯಲ್ಲಿ ನಾನು ಡೊನಾಲ್ಡ್ ಟ್ರಂಪ್ ಹಾಗೂ ಜಿ-7 ನಾಯಕರನ್ನು ಭೇಟಿ ಮಾಡಲು ಬಯಸಿದ್ದೇನೆ. ಈ ಸಭೆಗೆ ಉಕ್ರೇನ್, ಡೇನ್ಸ್, ಸಿರಿಯಾ ಹಾಗೂ ರಶ್ಯಾ ನಾಯಕರನ್ನೂ ಆಹ್ವಾನಿಸಬಹುದು ಎಂದು ಸಲಹೆ ನೀಡಿರುವ ಎಮ್ಯಾನುಯೆಲ್ ಮ್ಯಾಕ್ರನ್, “ನಾನು ಗುರುವಾರ ಟ್ರಂಪ್ ರನ್ನು ಭೋಜನ ಕೂಟಕ್ಕೆ ಹೊರಗೆ ಕರೆದೊಯ್ಯಲೂ ಬಯಸಿದ್ದೇನೆ” ಎಂದು ಆಹ್ವಾನ ನೀಡಿದ್ದಾರೆ.