×
Ad

ʼಟೈಮ್‌ʼನ ನೂರು ಅತ್ಯಂತ ಪ್ರಭಾವಿಗಳ ಪಟ್ಟಿಯಲ್ಲಿ ಟ್ರಂಪ್, ಮಸ್ಕ್, ಯೂನುಸ್; ಭಾರತೀಯರಿಗೆ ಸ್ಥಾನವಿಲ್ಲ

Update: 2025-04-17 16:54 IST

ಎಲಾನ್ ಮಸ್ಕ್ , ಡೊನಾಲ್ಡ್ ಟ್ರಂಪ್ , 

ಹೊಸದಿಲ್ಲಿ: ʼಟೈಮ್ ಮ್ಯಾಗಝಿನ್‌ʼನ 2025ನೇ ಸಾಲಿನ 100 ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಂತ್ರಜ್ಞಾನ ಉದ್ಯಮಿ ಎಲಾನ್ ಮಸ್ಕ್, ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಮತ್ತು ಬಾಂಗ್ಲಾದೇಶದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನುಸ್ ಸೇರಿದಂತೆ ಹಲವು ಪ್ರಮುಖರು ಸ್ಥಾನ ಪಡೆದಿದ್ದಾರೆ. ಆದರೆ ಈ ಪಟ್ಟಿಯಲ್ಲಿ ಯಾವುದೇ ಭಾರತಿಯರು ಕಾಣಿಸಿಕೊಂಡಿಲ್ಲ, ಹಿಂದಿನ ಸಾಧನೆಗಳನ್ನು ಪರಿಗಣಿಸಿದರೆ ಇದು ಗಮನಾರ್ಹ ಅನುಪಸ್ಥಿತಿಯಾಗಿದೆ.

ಕಳೆದ ವರ್ಷ ನಟಿ ಆಲಿಯಾ ಭಟ್ ಮತ್ತು ಒಲಿಂಪಿಕ್ ಕುಸ್ತಿಪಟು ಸಾಕ್ಷಿ ಮಲಿಕ್ ಅವರು ಟೈಮ್ ಮ್ಯಾಗಝಿನ್‌ನ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದ ಕೆಲವೇ ಭಾರತೀಯರಲ್ಲಿ ಸೇರಿದ್ದರು. ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲ, ವಿಶ್ವಬ್ಯಾಂಕ್ ಅಧ್ಯಕ್ಷ ಅಜಯ ಬಂಗಾ ಮತ್ತು ನಟ ದೇವ ಪಟೇಲ್ ಅವರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಕೆಲವು ಭಾರತೀಯ ಮೂಲದ ವ್ಯಕ್ತಿಗಳಾಗಿದ್ದರು.

ಟೈಮ್ ಮ್ಯಾಗಝಿನ್‌ನ 2025ನೇ ಸಾಲಿನ ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯು ರಾಜಕೀಯ,ವಿಜ್ಞಾನ,ಉದ್ಯಮ ಮತ್ತು ಮನರಂಜನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಳೆದೊಂದು ವರ್ಷದಲ್ಲಿ ಗಮನಾರ್ಹ ಪರಿಣಾಮಗಳನ್ನು ಬೀರಿದ ಮತ್ತು ಕೊಡುಗೆಗಳನ್ನು ಸಲ್ಲಿಸಿದ ಜಾಗತಿಕ ಗಣ್ಯರನ್ನು ಒಳಗೊಂಡಿದೆ. ಇವರಲ್ಲಿ ಮೆಕ್ಸಿಕೋ ಅಧ್ಯಕ್ಷೆ ಕ್ಲಾಡಿಯಾ ಶೀನ್‌ಬಾಮ್, ಅಮೆರಿಕದ ವಾಣಿಜ್ಯ ಸಚಿವ ಹೋವಾಡರ್ರ್ ಲುಟ್ನಿಕ್, ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವಾನ್ಸ್,ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧ್ನಾಮ್ ಘೆಬ್ರಿಯೆಸಸ್, ಜರ್ಮನಿಯ ಕನ್ಸರ್ವೇಟಿವ್ ನಾಯಕ ಫ್ರೆಡ್ರಿಕ್ ಮೆರ್ಝ್ ಮತ್ತು ದಕ್ಷಿಣ ಕೊರಿಯಾದ ನಾಯಕ ಲೀ ಜೇ-ಮಿಯುಂಗ್ ಅವರಂತಹ ಹಲವಾರು ಗಣ್ಯ ಜಾಗತಿಕ ನಾಯಕರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಗಮನಾರ್ಹವಾಗಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಯೂನುಸ್(84) ಪಟ್ಟಿಯಲ್ಲಿರುವ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದಾರೆ.

ಅಮೆರಿಕದ ಆರೋಗ್ಯ ಮತ್ತು ಮಾನವ ಸೇವೆಗಳ ಸಚಿವ ರಾಬರ್ಟ್ ಎಫ್ ಕೆನೆಡಿ ಜ್ಯೂನಿಯರ್,ಅರ್ಜೆಂಟೀನಾ ಅಧ್ಯಕ್ಷ ಜೇವಿಯರ್ ಮಿಲೀ ಮತ್ತು ಕಳೆದ ವರ್ಷ ನಿರಂಕುಶಾಧಿಕಾರಿ ಸಿರಿಯಾದ ಅಧ್ಯಕ್ಷ ಬಷರ್-ಅಲ್-ಅಸದ್ ಅವರನ್ನು ಪದಚ್ಯುತಗೊಳಿಸಿದ ದಂಗೆಯ ನೇತೃತ್ವ ವಹಿಸಿದ್ದ ಅಹ್ಮದ್ ಅಲ್-ಶರಾ ಅವರೂ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಪಟ್ಟಿಯಲ್ಲಿ ಯಾವುದೇ ಭಾರತೀಯರಿಲ್ಲದಿದ್ದರೂ ವರ್ಟೆಕ್ಸ್ ಫಾಮಾಸ್ಯೂಟಿಕಲ್ಸ್‌ನ ಭಾರತೀಯ ಮೂಲದ ಅಮೆರಿಕನ್ ಸಿಇಒ ಕೇವಲರಮಣಿ ಸ್ಥಾನವನ್ನು ಗಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News