ವ್ಯಾಪಾರ ನಿಲ್ಲಿಸುವುದಾಗಿ ಬೆದರಿಸಿದ್ದೆ ಎಂದ ಟ್ರಂಪ್; ಪ್ರಧಾನಿ ಮೋದಿಯ ಮೌನ ಪ್ರಶ್ನಿಸಿದ ಕಾಂಗ್ರೆಸ್
ಡೊನಾಲ್ಡ್ ಟ್ರಂಪ್ , ನರೇಂದ್ರ ಮೋದಿ | PTI
ಹೊಸದಿಲ್ಲಿ: ಭಾರತ ಮತ್ತು ಪಾಕಿಸ್ತಾನ ದೇಶಗಳು ಕದನ ವಿರಾಮವನ್ನು ಒಪ್ಪಿಕೊಳ್ಳುವಂತೆ ಒತ್ತಡ ಹೇರಲು ನಾನು ವ್ಯಾಪಾರ ನಿಲ್ಲಿಸುವ ಬೆದರಿಕೆ ಒಡ್ಡಿದ್ದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ಹೇಳಿಕೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಮೌನವನ್ನು ಕಾಂಗ್ರೆಸ್ ಪ್ರಶ್ನಿಸಿದೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್, “ಪ್ರಧಾನಿ ದೇಶವನ್ನುದ್ದೇಶಿಸಿ ಭಾಷಣ ಮಾಡುವುದಕ್ಕೂ ಕೆಲವೇ ನಿಮಿಷಗಳ ಮುನ್ನ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಹಿರಂಗಪಡಿಸಿದ ಸಂಗತಿಯು ಈ ಇಡೀ ಭಾಷಣವನ್ನೇ ತಲೆಕೆಳಗಾಗಿಸಿತು” ಎಂದು ವ್ಯಂಗ್ಯವಾಡಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ಹೇಳಿಕೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಸಂಪೂರ್ಣವಾಗಿ ಮೌನವಾಗಿದ್ದಾರೆ ಎಂದು ಆರೋಪಿಸಿರುವ ಅವರು, ಭಾರತವೇನಾದರೂ ಅಮೆರಿಕ ಮಧ್ಯಸ್ಥಿಕೆ ಅಥವಾ ತಟಸ್ಥ ಸ್ಥಳದಲ್ಲಿ ಪಾಕಿಸ್ತಾನದೊಂದಿಗೆ ಮಾತುಕತೆಗೆ ಒಪ್ಪಿಗೆ ಸೂಚಿಸಿತೆ ಎಂದು ಪ್ರಶ್ನಿಸಿದ್ದಾರೆ. ಭಾರತದ ಆಟೊಮೊಬೈಲ್ ಹಾಗೂ ಕೃಷಿ ವಲಯಗಳ ಮಾರುಕಟ್ಟೆಗೆ ಭಾರಿ ಪ್ರಮಾಣದ ಪ್ರವೇಶ ನೀಡಬೇಕು ಎಂಬ ಅಮೆರಿಕದ ಒತ್ತಡಕ್ಕೇನಾದರೂ ಭಾರತ ಮಣಿಯಲು ಸಿದ್ಧವಾಗಿದೆಯೆ ಎಂದೂ ಅವರು ಪ್ರಶ್ನಿಸಿದ್ದಾರೆ.
ಸೋಮವಾರ ಬೆಳಗ್ಗೆ ಕೂಡಾ, ಭಾರತ ಮತ್ತು ಪಾಕಿಸ್ತಾನದ ನಡುವೆ ಪೂರ್ಣಪ್ರಮಾಣದಲ್ಲಿ ಹಾಗೂ ತಕ್ಷಣವೇ ಕದನ ವಿರಾಮವೇರ್ಪಡುವಂತೆ ಮಾಡಲು ನಮ್ಮ ಸರಕಾರ ಮಧ್ಯಸ್ಥಿಕೆ ವಹಿಸಿತ್ತು ಎಂದು ಅಮೆರಿಕ ಅಧ್ಯ ಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದರು.
ನಾನು ಪ್ರಧಾನಿ ನರೇಂದ್ರ ಮೋದಿ ಹಾಗ ಅಮೆರಿಕ ಅಧ್ಯರಕ್ಷರಿಬ್ಬರ ಹೇಳಿಕೆಗಳನ್ನೂ ಕೇಳಿಸಿಕೊಂಡಿದ್ದು, ಈ ಹೇಳಿಕೆಗಳು ತುಂಬಾ ಗೊಂದಲಕಾರಿಯಾಗಿವೆ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಕೂಡಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.