ಭಾರತೀಯ ವಿಮಾನ ನಿಲ್ದಾಣಗಳಲ್ಲಿ ಕಾರ್ಯಚರಿಸುತ್ತಿರುವ ಟರ್ಕಿ ಸಂಸ್ಥೆಯ ಭದ್ರತಾ ಅನುಮತಿ ರದ್ದುಗೊಳಿಸಿದ ಸರಕಾರ
Photo | NDTV
ಹೊಸದಿಲ್ಲಿ : ಭಾರತೀಯ ವಿಮಾನ ನಿಲ್ದಾಣಗಳಲ್ಲಿ ಕಾರ್ಯಚರಿಸುತ್ತಿರುವ ಟರ್ಕಿ ಸಂಸ್ಥೆಯ ಭದ್ರತಾ ಅನುಮತಿಯನ್ನು ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಆದೇಶದಲ್ಲಿ ತಿಳಿಸಿದೆ. ಟರ್ಕಿ ಸಂಸ್ಥೆಯ ವಿರುದ್ಧ ಭಾರತದ ಮೊದಲ ಕ್ರಮ ಇದಾಗಿದೆ.
ಭಾರತದ 9 ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಕಾರ್ಯ ನಿರ್ವಹಿಸುವ ಟರ್ಕಿ ಕಂಪೆನಿ ʼಸೆಲೆಬಿ ಗ್ರೌಂಡ್ ಹ್ಯಾಂಡ್ಲಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ʼ ಈಗ ತನ್ನ ಭದ್ರತಾ ಅನುಮತಿಯನ್ನು ಕಳೆದುಕೊಂಡಿದೆ. ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಆದೇಶದಲ್ಲಿ ತಿಳಿಸಿದೆ.
ಸೆಲೆಬಿಯ ಭದ್ರತಾ ಅನುಮತಿಯನ್ನು ರದ್ದುಗೊಳಿಸುವುದರಿಂದ ಭಾರತದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಅದರ ಕಾರ್ಯಾಚರಣೆಗಳು ಸ್ಥಗಿತಗೊಳ್ಳಲಿದೆ.
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕರ ನೆಲೆಗಳನ್ನು ಗುರಿಯಾಗಿಸಿ ಭಾರತ ನಡೆಸಿದ ನಿಖರವಾದ ದಾಳಿಯ ನಂತರ ಟರ್ಕಿ ಪಾಕಿಸ್ತಾನಕ್ಕೆ ಮೌಖಿಕ ಬೆಂಬಲವನ್ನು ನೀಡಿದೆ. ಮೇ 8ರ ರಾತ್ರಿ ಭಾರತದ ಮೇಲೆ ಪಾಕಿಸ್ತಾನ ಹಾರಿಸಿದ ಡ್ರೋನ್‌ಗಳಲ್ಲಿ ಹೆಚ್ಚಿನವು ಟರ್ಕಿ ನಿರ್ಮಿತವಾಗಿತ್ತು ಎಂದು ಭಾರತೀಯ ಸೇನೆ ತಿಳಿಸಿತ್ತು.