ನಾಲ್ಕು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ: ಇಬ್ಬರು ಸೇನಾ ಸಿಬ್ಬಂದಿಗೆ ಜೀವಾವಧಿ ಶಿಕ್ಷೆ
ಬೆಹ್ರಾಂಪುರ: ನರ್ಸರಿ ಶಾಲೆಯಲ್ಲಿ ಓದುತ್ತಿದ್ದ ನಾಲ್ಕು ವರ್ಷ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಇಬ್ಬರು ಸೇನಾ ಸಿಬ್ಬಂದಿಗೆ ಇಲ್ಲಿನ ವಿಶೇಷ ಪೋಕ್ಸೋ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಈ ಘಟನೆ ಜನವರಿ 2ರಂದು ನಡೆದಿದ್ದು, ರಕ್ಷಣಾ ಸಿಬ್ಬಂದಿಯ ಮಕ್ಕಳನ್ನು ಕರೆತರುವ ಬಸ್ಸಿನಲ್ಲಿ ಶಾಲೆಯಿಂದ ವಾಪಸ್ಸಾಗುತ್ತಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಈ ಶಿಕ್ಷೆ ವಿಧಿಸಲಾಗಿದೆ. ಈ ಬಸ್ಸಿಗೆ ಬೆಂಗಾವಲು ರಕ್ಷಕರಾಗಿ ಈ ಇಬ್ಬರು ನಿಯುಕ್ತರಾಗಿದ್ದರು. ಲೈಂಗಿಕ ದೌರ್ಜನ್ಯ ಎಸಗಿದಾಗ ಬಾಲಕಿ ಕೂಗಿಕೊಂಡಿದನ್ನು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಬಾಲಕಿ ಕೊನೆಯದಾಗಿ ಬಸ್ಸಿನಿಂದ ಇಳಿದುದರ ಲಾಭ ಪಡೆದ ಆರೋಪಿಗಳು ದೌರ್ಜನ್ಯ ಎಸಗಿದ್ದರು.
ಇಬ್ಬರೂ ಸಿಬ್ಬಂದಿಗೆ ತಲಾ 10 ಸಾವಿರ ರೂಪಾಯಿಗಳ ದಂಡವನ್ನು ಕೂಡಾ ಹೆಚ್ಚುವರಿ ಜಿಲ್ಲಾ ಮತ್ತು ವಿಶೇಷ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶರು ವಿಧಿಸಿದ್ದಾರೆ. "ಒಂದು ವೇಳೆ ದಂಡವನ್ನು ಪಾವತಿಸದಿದ್ದಲ್ಲಿ ಆರು ತಿಂಗಳು ಜೈಲು ಶಿಕ್ಷೆ ವಿಧಿಸಲಾಗುತ್ತದೆ" ಎಂದು ವಿಶೇಷ ಸರ್ಕಾರಿ ಅಭಿಯೋಜಕ ನಾರಾಯಣ ಪಾಂಡಾ ಹೇಳಿದ್ದಾರೆ. "ಅವರ ಸಹಜ ಜೀವಿತಾವಧಿಯವರೆಗೆ ಜೈಲು ಶಿಕ್ಷೆ ಜಾರಿಯಲ್ಲಿರುತ್ತದೆ" ಎಂದು ವಿವರಿಸಿದ್ದಾರೆ.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಬಾಲಕಿಗೆ 10.5 ಲಕ್ಷ ರೂಪಾಯಿಗಳನ್ನು ನೀಡುವಂತೆಯೂ ತೀರ್ಪಿನಲ್ಲಿ ಸೂಚಿಸಲಾಗಿದೆ. ಇದನ್ನು ಶಿಕ್ಷಿತರಿಂದ ವಸೂಲಿ ಮಾಡಿಕೊಂಡು ನೀಡುವಂತೆ ನಿರ್ದೇಶಿಸಲಾಗಿದೆ. ಪೊಲೀಸರು, ವೈದ್ಯರು, ಚಾಲಕ ಸೇರಿದಂತೆ ಏಳು ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡು, ವೈದ್ಯಕೀಯ ವರದಿಯನ್ನು ಆಧರಿಸಿ ಈ ಶಿಕ್ಷೆ ವಿಧಿಸಲಾಗಿದೆ" ಎಂದು ಸ್ಪಷ್ಟಪಡಿಸಿದ್ದಾರೆ. ಒಬ್ಬ ಆರೋಪಿ ಗುಜರಾತಿನ 30 ವರ್ಷ ವಯಸ್ಸಿನ ಹವಾಲ್ದಾರ್ ಆಗಿದ್ದು, ಮತ್ತೊಬ್ಬ ಒಡಿಶಾದ ದೇವಗಢ ಜಿಲ್ಲೆಯ ಮೂಲದವನು. ನಾಯಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ.