ಪುಣೆ | ಒಂದೇ ವೇದಿಕೆಯಲ್ಲಿ ನಡೆದ ಹಿಂದೂ, ಮುಸ್ಲಿಂ ಜೋಡಿಗಳ ವಿವಾಹ
ಪುಣೆ: ಧಾರ್ಮಿಕ ಏಕತೆ ಮತ್ತು ಸಹಾನುಭೂತಿಯ ಸಂದೇಶವನ್ನು ನೀಡುವ ಬಾಲಿವುಡ್ ಚಲನಚಿತ್ರದ ಕಥಾವಸ್ತುವಿನಂತೆ ಒಂದೇ ವೇದಿಕೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಭಿನ್ನ ನಂಬಿಕೆಗಳ ಎರಡು ಜೋಡಿಗಳ ವಿವಾಹ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ ಎಂದು punemirror.com ವರದಿ ಮಾಡಿದೆ.
ಪುಣೆಯ ವನವಾಡಿಯ ರಾಜ್ಯ ಮೀಸಲು ಪೊಲೀಸ್ ಪಡೆ (SRPF) ಮೈದಾನದ ಬಳಿಯ ಅಲಂಕಾರನ್ ಲಾನ್ಸ್‌ನಲ್ಲಿ ಮಂಗಳವಾರ ಸಂಕೃತಿ ಕವಾಡೆ ಮತ್ತು ನರೇಂದ್ರ ಗಲಾಂಡೆ ಅವರ ವಿವಾಹವು ಸಂಜೆ 6.56ಕ್ಕೆ ನಿಗದಿಯಾಗಿತ್ತು. ಅದರಂತೆ ವಿವಾಹಕ್ಕೆ ಸಿದ್ಧತೆ ನಡೆಯುತ್ತಿದ್ದಂತೆ ಇದ್ದಕ್ಕಿದ್ದಂತೆ ಭಾರೀ ಮಳೆ ಸುರಿದಿದೆ. ಈ ವೇಳೆ ಅತಿಥಿಗಳು ಆಶ್ರಯಕ್ಕಾಗಿ ಪರದಾಡುವಂತಾಯಿತು. ಕಾರ್ಯಕ್ರಮ ಸ್ಥಗಿತಗೊಂಡಿತು.
ಪಕ್ಕದಲ್ಲಿ ಸಭಾಂಗಣವೊಂದರಲ್ಲಿನಿವೃತ್ತ ಪೊಲೀಸ್ ಅಧಿಕಾರಿ ಫಾರೂಕ್ ಕಾಝಿಯವರ ಪುತ್ರ ಮೊಹ್ಸಿನ್ ಮತ್ತು ಅವರ ವಧು ಮಾಹೀನ್ ಅವರ ವಿವಾಹ ಆಚರಣೆಯ ಭಾಗವಾದ 'ವಲಿಮಾ' ಕಾರ್ಯಕ್ರಮ ನಡೆಯುತ್ತಿತ್ತು.
ʼ15 ನಿಮಿಷಗಳಲ್ಲಿ ಮಳೆ ನಿಲ್ಲುತ್ತದೆ ಎಂದು ನಾವು ಭಾವಿಸಿದ್ದೆವು, ಆದರೆ ಮಳೆ ಮುಂದುವರಿದಿತ್ತು. ಅತಿಥಿಗಳು ಆಶ್ರಯಕ್ಕಾಗಿ ಎಲ್ಲಾ ದಿಕ್ಕುಗಳಲ್ಲಿಯೂ ಓಡುತ್ತಿದ್ದಂತೆ ಪಕ್ಕದಲ್ಲಿ ಸಭಾಂಗಣವಿರುವುದನ್ನು ನಾವು ಗಮನಿಸಿದೆವು. ಅಲ್ಲಿ ವಿವಾಹ ಕಾರ್ಯಕ್ರಮ ನಡೆಯುತ್ತಿತ್ತು. ಅವರನ್ನು ಸಂಪರ್ಕಿಸಿ, 'ಸಪ್ತಪದಿ' (ಹಿಂದೂ ವಿವಾಹ ಆಚರಣೆ) ಒಳಾಂಗಣದಲ್ಲಿ ಮಾಡಲು ಅನುಮತಿ ಕೋರಿದೆವು. ಅವರು ತಕ್ಷಣ ತಮ್ಮ ಕುಟುಂಬಸ್ಥರೊಂದಿಗೆ ಮಾತನಾಡಿ ನಮಗಾಗಿ ವೇದಿಕೆಯನ್ನು ಖಾಲಿ ಮಾಡಿದರು. ಅಷ್ಟೇ ಅಲ್ಲ, ಅವರ ಕುಟುಂಬ ಸದಸ್ಯರು ಮತ್ತು ಅತಿಥಿಗಳು ಸಮಾರಂಭಕ್ಕೆ ಸಿದ್ಧರಾಗಲು ನಮಗೆ ಸಹಾಯ ಮಾಡಿದರು. ಪರಸ್ಪರ ಸಂಪ್ರದಾಯಗಳಿಗೆ ಸಂಪೂರ್ಣ ಗೌರವದೊಂದಿಗೆ ಎರಡೂ ಆಚರಣೆಗಳನ್ನು ಒಂದರ ನಂತರ ಒಂದರಂತೆ ನಡೆಸಲಾಯಿತು ಎಂದು ನೀಲೇಶ್ ಶಿಂಧೆ ಎಂಬವರು ಹೇಳಿದರು.
ʼನಾವು ಈ ಮದುವೆ ಕಾರ್ಯಕ್ರಮಕ್ಕೆ ಎರಡು ತಿಂಗಳಿನಿಂದ ತಯಾರಿ ನಡೆಸುತ್ತಿದ್ದೆವು. ನಾವು ಅದ್ಧೂರಿಯಾಗಿ ಆಚರಿಸಲು ಬಯಸಿದ್ದೆವು. ಆದರೆ ಇದು ದೇವರ ಇಚ್ಛೆಯಾಗಿತ್ತು ಮತ್ತು ನಮಗೆ ಅವಕಾಶ ನೀಡಿದ್ದಕ್ಕೆ ಕಾಝಿ ಕುಟುಂಬಕ್ಕೆ ನಾವು ಕೃತಜ್ಞರಾಗಿದ್ದೇವೆ ಎಂದು ವಧು ಸಂಕೃತಿಯ ಅಜ್ಜ ಸಂತರಾಮ್ ಕವಾಡೆ ಹೇಳಿದರು.
ವಧುವಿನ ತಂದೆ ಚೇತನ್ ಕವಾಡೆ ಇದೇ ಭಾವನೆಯನ್ನು ವ್ಯಕ್ತಪಡಿಸಿದರು. ಅವ್ಯವಸ್ಥೆಯ ಸಮಯದಲ್ಲಿ ಕಾಝಿ ಕುಟುಂಬವು ನಮ್ಮ ಮಗಳ ಮಹತ್ವದ ಕಾರ್ಯಕ್ರಮಕ್ಕೆ ಸ್ಥಳಾವಕಾಶ ಕಲ್ಪಿಸಲು ಹಿಂಜರಿಯಲಿಲ್ಲ. ವಿಭಿನ್ನ ಜಾತಿ ಮತ್ತು ಧರ್ಮಗಳ ಇಬ್ಬರು ಜೋಡಿಗಳು ಒಂದೇ ವೇದಿಕೆಯಲ್ಲಿ ವಿವಾಹವಾದರು. ಇದು ಸಾಮರಸ್ಯದ ಸುಂದರ ಕ್ಷಣ. ಇದು ಭಾರತದಲ್ಲಿ ಮಾತ್ರ ಸಂಭವಿಸಬಹುದು ಎಂದು ಹೇಳಿದರು.
ವಿವಾಹ ಕಾರ್ಯಗಳ ಬಳಿಕ ಕಾಝಿ ಕುಟುಂಬ ಕವಾಡೆ ಕುಟುಂಬವನ್ನು ಭೋಜನಕ್ಕೆ ಆಹ್ವಾನಿಸಿತು. ಎರಡೂ ಜೋಡಿಗಳ ವಿವಾಹ ತಡರಾತ್ರಿಯವರೆಗೆ ನಡೆಯಿತು.
ʼವಿವಾಹ ಕಾರ್ಯಕ್ರಮಕ್ಕೆ ಅಡ್ಡಿಯಾಗುವುದನ್ನು ನೋಡಿದಾಗ, ಅವರ ನೋವು ನನಗೂ ಅನುಭವವಾಯಿತು. ನನಗೂ ಒಬ್ಬಳು ಮಗಳಿದ್ದಾಳೆ. ಸಹಾಯ ಮಾಡುವುದು ಸಹಜ. ಅವಳು ನನ್ನ ಮಗಳಂತೆಯೇ ಇದ್ದಾಳೆ. ಅಂತಹ ಅರ್ಥಪೂರ್ಣ ಕ್ಷಣದ ಭಾಗವಾಗಿರುವುದು ನಮ್ಮ ಅದೃಷ್ಟ ಎಂದು ನಾವು ಭಾವಿಸುತ್ತೇವೆ" ಎಂದು ಫಾರೂಕ್ ಕಾಝಿ ಹೇಳಿದರು.
ವಿಭಿನ್ನ ಧರ್ಮದ ಇಬ್ಬರು ಜೋಡಿಗಳ ವಿವಾಹ ಕಾರ್ಯಕ್ರಮದ ವೀಡಿಯೊ, ಪೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವ್ಯಾಪಕವಾಗಿ ಮೆಚ್ಚುಗೆ ವ್ಯಕ್ತವಾಗಿದೆ.