×
Ad

ಬಿಹಾರ | ಇಬ್ಬರು ಎನ್‌ಡಿಎ ನಾಯಕರು ಕಾಂಗ್ರೆಸ್ ಗೆ ಸೇರ್ಪಡೆ

Update: 2025-05-08 17:03 IST

ಸಾಂದರ್ಭಿಕ ಚಿತ್ರ 

ಪಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿಯಿರುವಾಗಲೇ, ಬಿಹಾರದಲ್ಲಿನ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ಇಬ್ಬರು ಹಿರಿಯ ನಾಯಕರು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ.

ಮಾಜಿ ಬಿಜೆಪಿ ನಾಯಕ ಅನಿಲ್ ಸಿಂಗ್ ಹಾಗೂ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷದಲ್ಲಿದ್ದ ಶಂಭು ಪಟೇಲ್ ಅವರು ಬುಧವಾರ ಬಿಹಾರ ಕಾಂಗ್ರೆಸ್ ಘಟಕದ ಅಧ್ಯಕ್ಷ ರಾಜೇಶ್ ಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಈ ವೇಳೆ ಮಾತನಾಡಿದ ರಾಜೇಶ್ ಕುಮಾರ್, ಅನಿಲ್ ಸಿಂಗ್ ಅವರಿಗೆ ಇದು ಮಾತೃ ಪಕ್ಷಕ್ಕೆ ಪುನರಾಗಮನವಾಗಿದ್ದು, ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ, ಅವರ ತಂದೆ ರಾಮ್ ರಾಜ್ ಸಿಂಗ್ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಅನಿಲ್ ಸಿಂಗ್ ಕೂಡಾ ಈ ಹಿಂದೆ ಈಗ ರದ್ದುಗೊಂಡಿರುವ ಚಾಂಡಿ ವಿಧಾನಸಭಾ ಕ್ಷೇತ್ರವನ್ನು ಮೊದಲಿಗೆ ಕಾಂಗ್ರೆಸ್ ಶಾಸಕರಾಗಿ ಹಾಗೂ ನಂತರ ಜೆಡಿಯು ಪಕ್ಷದ ಈ ಹಿಂದಿನ ಅವತಾರವಾದ ಸಮತಾ ಪಕ್ಷದ ಶಾಸಕರಾಗಿ ಎರಡು ಬಾರಿ ಪ್ರತಿನಿಧಿಸಿದ್ದರು ಎಂದು ಹೇಳಿದರು.

ನಂತರ ಮಾತನಾಡಿದ ಜೆಡಿಯು ಪಕ್ಷದ ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶಂಭು ಪಟೇಲ್, ಜೆಡಿಯು ಪಕ್ಷದಲ್ಲಿ ನನಗೆ ಉಸಿರುಗಟ್ಟಿದಂತಾಗಿತ್ತು ಎಂದು ತಿಳಿಸಿದರು.

ಈ ವರ್ಷದ ಕೊನೆಯಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ, ಅನಿಲ್ ಸಿಂಗ್ ಹಾಗೂ ಶಂಭು ಪಟೇಲ್ ರ ಕಾಂಗ್ರೆಸ್ ಸೇರ್ಪಡೆಯಿಂದಾಗಿ ಪಕ್ಷಕ್ಕೆ ಬಲ ಬಂದಂತಾಗಿದೆ ಎಂದು ರಾಜೇಶ್ ಕುಮಾರ್ ಅಭಿಪ್ರಾಯ ಪಟ್ಟರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News